ಕೆಎಚ್‌ಎಂಗೆ ಛಲವಾದಿ ಮಹಾ ಸಭಾ ಬೆಂಬಲ
ಕೋಲಾರ: ನಾನೀಗ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಬೆಂಬಲ ನೀಡುವುದಾಗಿ ಛಲವಾದಿ ಮಹಾ ಸಭಾದ ಸಂಸ್ಥಾಪಕ ಕೆ. ಶಿವರಾಮ್ ತಿಳಿಸಿದರು.
ಕೋಲಾರದಲ್ಲಿ ಭಾನುವಾರ ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳಿಗೆ ಛಲವಾದಿಗಳ ಮತ ದೊರೆಯುವಂತೆ ಮಾಡಿದ್ದೇನೆ ಎಂದರು. ಕೋಲಾರ ಜಿಲ್ಲೆಯ ಸ್ನೇಹಿತರು, ಹಿತೈಷಿಗಳು ಮುಂಬರುವ ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದಾರೆ. ಆದರೆ, ಕೆ.ಎಚ್. ಮುನಿಯಪ್ಪನವರು ಕಾಂಗ್ರೆಸ್ ನಾಯಕರಾಗಿರುವುದರಿಂದ ಹಾಗೂ ಹಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾರಣ ತಾವು ಕೋಲಾರದಿಂದ ಸ್ಪರ್ಧಿಸಲು ಪ್ರಯತ್ನಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದೇನೆ, ಟಿಕೆಟ್ ಸಿಗುವ ಭರವಸೆಯಿದೆ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೂ ಕಾಂಗ್ರೆಸ್ ಪಕ್ಷದ ಪರವಾಗಿಯೇ ಕೆಲಸ ಮಾಡುತ್ತೇನೆಂದು ಹೇಳಿದರು.
ಸಾಮಾಜಿಕ ನ್ಯಾಯ ಸಿಕ್ಕಿದೆ: ಸಮುದಾಯಕ್ಕೆ ಸೇರಿದ ಕೆಪಿಸಿಸಿ ಅಧ್ಯಕ್ಷರೂ ಆದ ಡಾ.ಜಿ. ಪರಮೇಶ್ವರ್ ಮತ್ತು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಗುವುದರಲ್ಲಿ ಅನುಮಾನವಿಲ್ಲ, ಇವರಿಬ್ಬರು ನಾಯಕರು ಜೆಡಿಎಸ್, ಬಿಜೆಪಿ ಅಥವಾ ಇನ್ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಉನ್ನತ ಸ್ಥಾನ-ಮಾನ ಸಿಗುತ್ತಿರಲಿಲ್ಲವೆಂದು ಹೇಳಿದರು. ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಇಂದು ಛಲವಾದಿಗಳಿಗೆ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಎಂಬುದು ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದ ಕೊಡುಗೆ ಛಲವಾದಿ ಮಹಾ ಸಭಾಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ, ಜನಾಂಗದ ಸಂಘಟನೆ ಮತ್ತು ಅಭಿವೃದ್ಧಿ ಮಹಾಸಭಾ ಕೆಲಸ ಮಾಡುತ್ತಿದೆ. ಆದರೆ, ಇಂದು ಪ್ರತಿ ಸಮುದಾಯ ತನ್ನ ಶ್ರೇಯೋಭಿವೃದ್ಧಿಗಾಗಿ ರಾಜಕೀಯ ಆಶ್ರಯ, ಬೆಂಬಲ ಪಡೆಯುತ್ತಿರುವುದರಿಂದ ನಮ್ಮ ಜನಾಂಗದ ಆಶಯಕ್ಕೆ ತಕ್ಕಂತೆ ಸೂಕ್ತ ಕಾಲದಲ್ಲಿ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದೆಂದು ನುಡಿದರು.