ಜಾನುವಾರು ವಿಮೆ ಮಾಡಿಸಿ, ಆರ್ಥಿಕ ನೆರವು ಪಡೆಯಿರಿ
ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಜಾನುವಾರುಗಳು ಮೃತಪಟ್ಟಾಗ ಆರ್ಥಿಕ ನೆರವು ನೀಡಿ ರೈತರ ಕೈ ಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಾನುವಾರು ವಿಮೆ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ರಾಜ್ಯಾದ್ಯಂತ ಸಾವಿರಾರು ಹಸುಗಳು ಈಗಾಗಲೇ ಕಾಲು ಬಾಯಿ ಜ್ವರದಿಂದ ಮೃತಪಟ್ಟಿದ್ದು ಸಾಕಷ್ಟು ರಾಸುಗಳು ಕಾಲುಬಾಯಿ ಜ್ವರದಿಂದ ಬಳಲುತ್ತಿವೆ. ಬಹಳಷ್ಟು ಸಂದರ್ಭಗಳಲ್ಲಿ ಚೆನ್ನಾಗಿರುವ ರಾಸುಗಳು ಕಾಯಿಲೆಗಳಿಗೆ ಗುರಿಯಾಗಿ ಮೃತಪಡುವಂತಹ ಪ್ರಕರಣಗಳು ಹೆಚ್ಚಿಗೆ ಇರುತ್ತದೆ. ಇದರಿಂದ ಸಾಲ ಸೋಲ ಮಾಡಿ ರಾಸುಗಳನ್ನು ಖರೀದಿಸಿ ಮುಂದೆ ಹಾಲು ಉತ್ಪಾದನೆಯಿಂದ ಬರುವ ಆದಾಯದಿಂದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕೆಂಬ ರೈತರ ನಿರೀಕ್ಷೆ ತಲೆ ಕೆಳಗಾಗುತ್ತದೆ. ಅಲ್ಲದೇ ಆರ್ಥಿಕ ಸಂಕಷ್ಟ ಎದುರಾಗಿ ದಿಕ್ಕು ತೋಚದಂತಹ ವಾತಾವರಣ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾರಂಭದಲ್ಲಿ ತೋರುವ ನಿರ್ಲಕ್ಷ್ಯದಿಂದ ಕೊನೆಯಲ್ಲಿ ತೊಂದರೆಗೆ ಸಿಲುಕಿಕೊಳ್ಳದಿರಲು ರಾಸುಗಳಿಗೆ ಒದಗಿಸುವ ವಿಮೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪಶು ವೈದ್ಯರು ಕೋರಿದ್ದಾರೆ.
ವಿಮೆ ಸೌಲಭ್ಯವು ಬಹಳಷ್ಟು ಮಂದಿ ರೈತರು ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಂಡು, ಇನ್ನೂ ಕೆಲ ರೈತರು ಸಾಲ ರಹಿತವಾಗಿ ರಾಸುಗಳನ್ನು ಖರೀದಿಸುತ್ತಾರೆ. ಯಾವುದೇ ರೀತಿ ರಾಸುಗಳನ್ನು ಖರೀದಿಸಿದರೂ ರಾಸುಗಳಿಗೆ ವಿಮೆ ಮಾಡಿಸುವುದು ಒಳ್ಳೆಯದು ಎನ್ನುವುದು ಪಶು ವೈದ್ಯರ ಸಲಹೆಯಾಗಿದೆ. ಕೆಲವರು ಮೊದಲು ಕಂತನ್ನು ಪಾವತಿಸಿ ಆ ನಂತರ ವಿಮೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದ ವಿಮೆ ಮಾಡಿಸಿ ಕೊನೆಗೆ ಪ್ರಯೋಜನವಿಲ್ಲದಂತಾಗುತ್ತದೆ. ಇದೀಗ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ವಿಮೆ ಸೌಲಭ್ಯವನ್ನು ಒದಗಿಸುತ್ತಿದ್ದು ಪ್ರತಿ ವರ್ಷ ವಿಮೆ ಸೌಲಭ್ಯವನ್ನು ಕಟ್ಟುವುದರ ಬದಲಿಗೆ ಒಂದೇ ಬಾರಿಗೆ 3 ವರ್ಷಗಳ ಅವಧಿಗೆ ವಿಮೆ ಮಾಡಿಸಿದರೆ ರೈತರಿಗೆ ಲಾಭದಾಯಕವಾಗಲಿದೆ. ವರ್ಷಕ್ಕೆ ವಿಮೆ ಮಾಡಿಸಿದರೆ 2 ಮತ್ತು 3 ವರ್ಷಗಳ ಸಹಾಯಧನ ಲಭ್ಯವಿರುವುದಿಲ್ಲ. ಆದರೆ,3 ವರ್ಷಗಳ ಅವಧಿಗೆ ವಿಮೆ ಮಾಡಿಸಿದರೆ ಸರ್ಕಾರದಿಂದ ಸಹಾಯ ಧನವೂ ಲಭ್ಯವಾಗುತ್ತದೆ. ಅಲ್ಲದೇ ಪ್ರತಿ ವರ್ಷ ಹಣವನ್ನು ಕಟ್ಟುವುದು ಮತ್ತು ವಿಮೆ ಸೌಲಭ್ಯ ಲಾಪ್ಸ್ ಆಗುವುದು ತಪ್ಪುತ್ತದೆ.
ಶುಲ್ಕ ದರ ನಿಗದಿ: ಈ ವಿಮಾ ಯೋಜನೆಗೆ ಶೇ.50 ರಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ಭರಿಸಲಿದ್ದು ಉಳಿಕೆ 50 ರಷ್ಟು ಪ್ರೀಮಿಯಂ ದರ ಹಾಗೂ ಸೇವಾ ತೆರಿಗೆಯನ್ನು ಮಾತ್ರ ರೈತರು ಭರಿಸಬೇಕಾಗುತ್ತದೆ. ಒಂದು ಸೂಲಿಗೆ ಕನಿಷ್ಠ 1500 ಲೀಟರ್ ಹಾಲು ನೀಡುವಂತಹ ಹಸು, ಎಮ್ಮೆಗಳಿಗೆ ವಿಮೆ ಮಾಡಿಸಬಹುದಾಗಿದೆ. ಫಲಾನುಭವಿಯೊಬ್ಬರು ಗರಿಷ್ಠ 2 ರಾಸುಗಳಿಗೆ ಮಾತ್ರ ವಿಮಾ ಸೌಲಭ್ಯ ಸಿಗುತ್ತದೆ.ವಿಮೆ ಪಾಲಿಸಿ ವಿಸ್ತರಣೆಗೆ ಸಹಾಯಧನ ಅವಶ್ಯಕತೆ ಇಲ್ಲ. ಅಂದರೆ ರಾಸುವಿನ ಮಾರುಕಟ್ಟೆ ದರವನ್ನು ಫಲಾನುಭವಿ, ಪಶುವೈದ್ಯರು ಹಾಗೂ ವಿಮಾ ಕಂಪನಿಗಳು ಜಂಟಿಯಾಗಿ ನಿರ್ಧರಿಸಲಿದ್ದು ಮಾಲೀಕರು ಬದಲಾದರೂ ರಾಸುಗಳಿಗೆ ವಿಮಾ ರಕ್ಷಣೆ ಮುಂದುವರೆಯುತ್ತದೆ. ಇನ್ನೂ ಪ್ರಮುಖವಾಗಿ ವಿಮೆ ಸೌಲಭ್ಯಕ್ಕಾಗಿ ರಾಸುಗಳ ಕಿವಿಗೆ ಓಲೆ ಹಾಕಿಸಬೇಕು. ಒಂದು ವೇಳೆ ಓಲೆಯೇನಾದರೂ ಕಳೆದುಹೋದ ಪಕ್ಷದಲ್ಲಿ ತಕ್ಷಣವೇ ಹತ್ತಿರದ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಬೇರೆ ಓಲೆಯನ್ನು ಹಾಕಿಸಿಕೊಳ್ಳಬೇಕು. ಓಲೆ ಇಲ್ಲವಾದಲ್ಲಿ ವಿಮಾ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ವಿಮಾ ಅವಧಿಯಲ್ಲಿ ಜಾನುವಾರು ಮರಣಕ್ಕೀಡಾದರೆ ಮಾತ್ರ ವಿಮಾ ಸೌಲಭ್ಯ ದೊರೆಯಲಿದ್ದು ವಿಮಾ ಅವಧಿಯಲ್ಲಿ ರಾಸು ಮರಣಕ್ಕೀಡಾದರೆ ತಕ್ಷಣವೇ ಪಶುವೈದ್ಯಾಧಿಕಾರಿ ಹಾಗೂ ವಿಮಾ ಕಂಪನಿಯ ಗಮನಕ್ಕೆ ತಂದು ಮರಣೋತ್ತರ ಪರೀಕ್ಷೆ ಮಾಡಿಸಬೇಕು. ರಾಸು ಮರಣ ಹೊಂದಿದಾಗ ಫೋಟೋ ತೆಗೆಸುವುದು ಕಡ್ಡಾಯ ಎಂದಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದ್ದಾರೆ.