ಸುದ್ದಿ ಸಂಕ್ಷೇಪ
ಇಂದು ಈ ಹೃದಯ ಚಿತ್ರಕ್ಕೆ ಮುಹೂರ್ತ
ಕೋಲಾರ: ನನ್ನ ಸ್ವಂತ ಅನುಭವ, ಆಶಯಗಳನ್ನು ಆಧರಿಸಿರುವ ಈ ಹೃದಯ ಕನ್ನಡ ಚಿತ್ರ ನಿರ್ಮಾಣಕ್ಕೆ ಸೋಮವಾರ ಮುಹೂರ್ತ ನಿಗದಿ ಪಡಿಸಲಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಚಿತ್ರನಟ ಕೆ. ಶಿವರಾಮ್ ತಿಳಿಸಿದರು. ಕೋಲಾರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯಕ್ಕೆ ಪ್ರವೇಶ ಮಾಡಿದ್ದರೂ ಚಲನಚಿತ್ರಗಳಲ್ಲಿ ನಟಿಸುವುದಕ್ಕೆ ಯಾವುದೇ ಅಡ್ಡಿಯಾಗಿಲ್ಲ, ಎಸ್. ಮಹೇಂದ್ರ ನಿರ್ದೇಶನದ ಹೊಸ ಚಿತ್ರದಲ್ಲಿ ನಾಯಕ ನಟಿಯಾಗಿ ದಿಲ್ಷಾದ್ ಅಭಿನಯಸಲಿದ್ದಾರೆ. ಕರ್ನಾಟಕದಲ್ಲೇ ಪೂರ್ಣ ಪ್ರಮಾಣದ ಚಿತ್ರೀಕರಣ ನಡೆಯಲಿದ್ದು, ಅದಷ್ಟು ಬೇಗನೆ ಚಿತ್ರ ನಿರ್ಮಿಸಿ ಬಿಡುಗಡೆ ಮಾಡಲಾಗುವುದೆಂದರು.
ಇಂದು ಕೇಂದ್ರ ಸಚಿವರ ಭೇಟಿ
ಚಿಕ್ಕಬಳ್ಳಾಪುರ: ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಡಾ.ಎಂ. ವೀರಪ್ಪ ಮೊಯಿಲಿ ಅ.7 ರಂದು ಬೆಳಿಗ್ಗೆ 10.30 ಕ್ಕೆ ಜಿಲ್ಲೆಗೆ ಭೇಟಿ ನೀಡಲಿದ್ದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಹೋಬಳಿ ಕೇಂದ್ರಸ್ಥಾನಗಳಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಬೆಳಗ್ಗೆ 10.30 ರಿಂದ 11.30 ರವರೆಗೆ ಬಾಗೇಪಲ್ಲಿ ಕಸಬಾ ಹೋಬಳಿ, ಮಧ್ಯಾಹ್ನ 12 ರಿಂದ 1.30 ರವರೆಗೆ ಮಿಟ್ಟೇಮರಿ ಹೋಬಳಿ, ಮಧ್ಯಾಹ್ನ 2.30 ರಿಂದ 3.30 ರವರೆಗೆ ಚೇಳೂರು ಹೋಬಳಿ, ಪಾತಪಾಳ್ಯದಲ್ಲಿ ಸಂಜೆ 4 ರಿಂದ 5 ರ ವರೆಗೆ ಜನಸಂಪರ್ಕ ಸಭೆ ನಡೆಸಲಿದ್ದಾರೆ.
ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಜಾರಿಗಾರರು 3 ಮತ್ತು ಜವಾನ 1 ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನ.8 ರೊಳಗೆ ಮುಖ್ಯ ಆಡಳಿತಾಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.
ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳ ಆಯ್ಕೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಭರತ್ ರೆಡ್ಡಿ, ಕಾರ್ತಿಕ್, ತಾಯಪ್ಪ, ಅಶ್ವತ್ ಹಾಗೂ ಕಾರ್ಯದರ್ಶಿಗಳಾಗಿ ಆನಂದ್ ರೆಡ್ಡಿ, ಕಿರಣ್, ರಾಜೇಶ್ರೆಡ್ಡಿ, ನರೇಶ್, ನಾರಾಯಣಸ್ವಾಮಿ, ಕೋಶಾಧ್ಯಕ್ಷರಾಗಿ ಮುರಳಿ ಮತ್ತು ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಗಂಗಿರೆಡ್ಡಿ, ಜಗನ್ ಮೋಹನ್ ರೆಡ್ಡಿ, ಬೈರಾರೆಡ್ಡಿ, ವೆಂಕಟೇಶ್, ನಾರಾಯಣಸ್ವಾಮಿ, ಸುನೀಲ್, ಶಿವಕುಮಾರ್, ಸುಧಾಕರರೆಡ್ಡಿ, ವೆಂಕಟೇಶ್, ಶ್ರೀನಿವಾಸ್ ಕಲ್ಯಾಣ್, ರಂಗನಾಥಗೌಡ, ಮಧುಸೂದನ್ ರೆಡ್ಡಿ, ರಾಘವೇಂದ್ರ, ಶ್ರೀಧರ್ರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾಧ್ಯಕ್ಷ ಮಿಟ್ಟಹಳ್ಳಿ ಮಂಜುನಾಥರೆಡ್ಡಿ ಚಿಕ್ಕಬಳ್ಳಾಪುರದ ಪಕ್ಷದ ಕಚೇರಿಯಲ್ಲಿ ಘೋಷಿಸಿದರು. ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್, ನವೀನ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಡರೆಡ್ಡಿ, ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಶ್ರೀನಿವಾಸರೆಡ್ಡಿ ಇದ್ದರು.