ಅಬ್ದುಲ್ ಸಲೀಂ ಅಮಾನತು
ಕೆಜಿಎಫ್: ಮಾರಿಕುಪ್ಪಂ ಪೊಲೀಸ್ ವ್ಯಾಪ್ತಿಯಲ್ಲಿ ಮುಚಲ್ಪಟ್ಟಿರುವ ಬಿಜಿಎಂಎಲ್ ಚಿನ್ನದ ಗಣಿಗೆ ಸೇರಿದ ಮೈಸೂರು ಮಿಲ್ನೊಳಗೆ ಕಳುವು ಮಾಡಲು ಯತ್ನಿಸಿದ 19 ಮಂದಿ ಆರೋಪಿಗಳಿಗೆ ಸಹಕರಿಸಿದ್ದ ಚಾಂಪಿಯನ್ರೀಫ್ ಪೊಲೀಸ್ ಠಾಣಾ ಸರ್ಕಲ್ ಇನ್ಸಪೆಕ್ಟರ್ ಅಬ್ದುಲ್ ಸಲೀಂ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸೆಫಟ್ ತಿಳಿಸಿದ್ದಾರೆ. ಬಿಜಿಎಂಎಲ್ ಚಿನ್ನದ ಗಣಿ ಮೈಸೂರು ಮಿಲ್ನಲ್ಲಿ ಕಳವು ಮಾಡುವ ಉದ್ದೇಶದಿಂದ ಬಿಜಿಎಂಎಲ್ ಭದ್ರತಾ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಆ.17ರಂದು ಮಧ್ಯರಾತ್ರಿ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿ ಲಕ್ಷಾಂತರ ಬೆಲೆ ಬಾಳುವ ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡಲು ಯತ್ನಿಸುತ್ತಿದ್ದರು. ಆರೋಪಿಗಳನ್ನು ಪೊಲೀಸರು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಇನ್ಸ್ಪೆಕ್ಟರ್ ಅಬ್ದುಲ್ ಸಲೀಂ ಅವರನ್ನು ಕಳುವಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕುಮ್ಮಕ್ಕು ನೀಡಿ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸ್ ಮಹಾ ನಿರೀಕ್ಷಕರ ಆದೇಶದ ಮೇರೆಗೆ ಆ.22ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಎಸ್ಪಿ ಡಾ. ಸೆಫಟ್ ತಿಳಿಸಿದ್ದಾರೆ.
ಕಾಮಗಾರಿಗಳ ಚಾಲನೆ
ಟೇಕಲ್: ಕೆ.ಜಿ.ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಾದ ಬಸಾಪುರ, ಕೆಂಪಸಂದ್ರ, ಅನಿಗಾನಹಳ್ಳಿ, ಹಳೇಪಾಳ್ಯ, ಹುಣಸಿಕೋಟೆ, ಉಳ್ಳೇರಹಳ್ಳಿ, ಕೂಗಿಟಿಗಾನಹಳ್ಳಿ, ಜಂಗಾಲಹಳ್ಳಿ, ಬಲ್ಲೇರಿ, ಕದಿರೇನಹಳ್ಳಿ, ಓಬಟ್ಟಿ ಗ್ರಾಮಗಳಿಗೆ ಶಾಸಕ ಮಂಜುನಾಥಗೌಡರು ಸೋಮವಾರ ಆಗಮಿಸಿ ಜನರಿಗೆ ಅಭಿನಂದನೆ ತಿಳಿಸಿ ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.