ಕುಡಿವ ನೀರಲ್ಲಿ ವಾಮಾಚಾರ; ಗ್ರಾಮಸ್ಥರ ಪ್ರತಿಭಟನೆ
ಚಿಂತಾಮಣಿ: ಕುಡಿಯುವ ನೀರಿನಲ್ಲಿ ಕಿಡಿಗೇಡಿಗಳು ವಾಮಾಚಾರ ನಡೆಸಿ ನೀರನ್ನು ಕಲುಷಿತ ಮಾಡಿರುವುದಾಗಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿರುವ ಘಟನೆ ಮುರುಗಮಲ್ಲ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಹಲವು ಕಿಡಿಗೇಡಿಗಳು ಕಳೆದ ರಾತ್ರಿ ಗ್ರಾಮದ ಕುಂಟಪಾಳ್ಯ ಕೆರೆ ಮತ್ತು ಬಾವಿಯಲ್ಲಿ ಮಹಾಲಯ ಅಮವಾಸ್ಯೆ ಅಂಗವಾಗಿ ಕ್ಷುದ್ರಪೂಜೆ ನಡೆಸಿ ಕುಡಿಯುವ ನೀರಿನಲ್ಲಿ ತೆಂಗಿನಕಾಯಿ, ಬಟ್ಟೆ, ಮಡಿಕೆ ಹಾಗೂ ಇತರೆ ಸಾಮಾಗ್ರಿಗಳನ್ನು ಹಾಕಿರುವ ಬಗ್ಗೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿತು. ನೂರಾರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನಡೆದ ವಾಮಾಚಾರದ ಬಗ್ಗೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ: ಯಾತ್ರಾಸ್ಥಳವಾದ ಮುರುಗಮಲ್ಲ ಗ್ರಾಮಕ್ಕೆ ಅಮವಾಸ್ಯೆ ದಿನದಂದು ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಿಗರು ಹಾಗೂ ಹಲವು ಸನ್ಯಾಸಿಗಳು ಇಲ್ಲಿಗೆ ಆಗಮಿಸಿ ಹೋಗುವುದು ರೂಢಿಯಲ್ಲಿದೆ. ಆದರೆ ಗ್ರಾಮದ ಜನಸಾಮಾನ್ಯರಿಗೆ ಕುಡಿಯುವ ನೀರಿನ ಆಶ್ರಯವಾದ ಕುಂಟಪಾಳ್ಯ ಕೆರೆ ಹಾಗೂ ಬಾವಿಯಲ್ಲಿ ಶುದ್ಧವಾದ ನೀರನ್ನು ಗ್ರಾಮಸ್ಥರು ಕುಡಿಯಲಿಕ್ಕೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಾವುದೇ ನಾಮಫಲಕ ಮತ್ತು ಕಾನೂನು ಉಲ್ಲಂಘನೆ ಪ್ರಕಟಣೆ ತಿಳಿಸದೆ ಇರುವುದೇ ಈ ಕೃತ್ಯಕ್ಕೆ ಕಾರಣವಾಗಿರಬಹುದೆಂದು ಮತ್ತು ಕುಡಿಯುವ ನೀರಿನ ಸ್ಥಳದ ಸುತ್ತಲೂ ಬೇಲಿ ಅಥವಾ ಸಾರ್ವಜನಿಕರ ಪ್ರಕಟಣೆ ನಾಮಫಲಕ ಅಳವಡಿಸಬೇಕೆಂದು ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ತಿಳಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ನಡೆಯಲು ಸಾಧ್ಯವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಗ್ರಾಮ ಮುಖಂಡರು ಸೇರಿ ವಾಮಾಚಾರ ಮಾಡಿದ ವಸ್ತುಗಳನ್ನು ನೀರಿನಿಂದ ಹೊರತೆಗೆದು ಶುದ್ಧ ನೀರಿಗಾಗಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಪೊಲೀಸರು ಸಾರ್ವಜನಿಕರ ಹಿತಾಸಕ್ತಿಯಿಂದ ಕೆರೆ ಹಾಗೂ ಬಾವಿಗೆ ರಕ್ಷಣೆ ನೀಡಬೇಕಾಗಿ ಮತ್ತು ಪರಸ್ಥಳಗಳಿಂದ ಆಗಮಿಸಿದ ಕಿಡಿಗೇಡಿಗಳ ಬಗ್ಗೆ ಪೊಲೀಸರು ಗಸ್ತು ತಿರುಗಿ ನೀರನ್ನು ಸಂರಕ್ಷಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಿಸಿ ಕ್ಯಾಮೆರಾ ಅಳವಡಿಸಲು ಗ್ರಾಮಸ್ಥರ ಆಗ್ರಹ: ತಾಲೂಕಿನಲ್ಲಿ ವಿವಿಧ ಧಾರ್ಮಿಕ ಸ್ಥಳಗಳಿಗೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಹಾಗೂ ಗ್ರಾಮಸ್ಥರ ಉಪಯೋಗಕ್ಕಾಗಿ ಮುರುಗಮಲ್ಲ ಗ್ರಾಮದಲ್ಲಿ ಈಗಿರುವ ಹೊರ ಪೊಲೀಸ್ ಠಾಣೆ ಬದಲಿಗೆ ಪೊಲೀಸ್ ಠಾಣೆಯನ್ನು ತೆರೆದು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೀಡಬೇಕೆಂದು ಪೊಲೀಸ್ ಉನ್ನತ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಪತ್ರವನ್ನು ನೀಡಿದ್ದರೂ ಇಲ್ಲಿಯ ತನಕ ಕಾರ್ಯರೂಪಕ್ಕೆ ಬರುವುದೇ ಇರುವುದರ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದಾದರೂ ಸಂಬಂಧಪಟ್ಟ ಪೊಲೀಸರು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ರಕ್ಷಣೆ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.