ಕೈ' ಮಿಲಾಯಿಸಿದ ಕಾರ್ಯಕರ್ತರು
ಬಾಗೇಪಲ್ಲಿ: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ನಡೆಸಿದ ಸಭೆ ಗೊಂದಲ, ರಂಪಾಟಕ್ಕೆ ಕಾರಣವಾಯಿತು.
ತಾಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ವೀರಪ್ಪ ಮೊಯ್ಲಿ ಜೊತೆಯಲ್ಲಿ ಮಾಜಿ ಶಾಸಕ ಎನ್. ಸಂಪಂಗಿ ಬಂದು ವೇದಿಕೆಯಲ್ಲಿ ಆಸೀನರಾಗುತ್ತಿದ್ದಂತೆ ಹಾಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಬಣದ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ತಕ್ಷಣ ವೇದಿಕೆಯಿಂದ ಕೆಳಗೆ ಇಳಿಯುವಂತೆ ಘೋಷಣೆಗಳನ್ನು ಕೂಗಿದರು.
ಇದಕ್ಕೆ ಪ್ರತಿಯಾಗಿ ಸಂಪಂಗಿ ಬೆಂಬಲಿಗರು ಸಹ ಶಾಸಕ ಸುಬ್ಬಾರೆಡ್ಡಿ ಬೆಂಬಲಿಗರ ವಿರುದ್ಧ ತಿರುಗಿ ಬಿದ್ದರು. ಇದರಿಂದ ಜನಸ್ಪಂದನ ಸಭೆ ಗಲಾಟೆಯ ಸಭೆಯಾಗಿ ಮಾರ್ಪಟ್ಟಿತ್ತು. ಹಾಲಿ ಶಾಸಕರ ಕೆಲ ಹಿಂಬಾಲಕರು ವಿವಿಧ ಸರ್ಕಾರಿ ಕಾರ್ಯಕ್ರಮಗಳ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಕೇಂದ್ರ ಸಚಿವರ ಜೊತೆಯಲ್ಲಿ ಈ ಭಾಗದ ಮಾಜಿ ಶಾಸಕರು ಏಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಮಾಜಿ ಶಾಸಕರ ಬೆಂಬಲಿಗರು ವಾದಿಸಿದರು. ಇದರಿಂದ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಒಂದು ಹಂತದಲ್ಲಿ ಮಾಜಿ ಶಾಸಕರು ವೇದಿಕೆಯಿಂದ ಹೊರ ಬರುವಂತೆ ಘೋಷಣೆ ಕೂಗಿದಾಗ ಮಾಜಿ ಮತ್ತು ಹಾಲಿ ಶಾಸಕರ ಬೆಂಬಲಿಗರು ಕೈ ಕೈ ಮಿಲಾಯಿಸಿಕೊಳ್ಳುವಂತಹ ಹಂತಕ್ಕೆ ಹೋದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ನಡೆಸಿದ ಪ್ರಯತ್ನ ಫಲಿಸಲಿಲ್ಲ. ಆಗ ಹಾಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮತ್ತು ಮಾಜಿ ಶಾಸಕ ಸಂಪಂಗಿ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿದರು.
ಸಚಿವರಿಗೆ ಘೇರಾವ್: ಕೇಂದ್ರ ಸಚಿವ ಮೊಯ್ಲಿಗೆ ಜನರು ಘೇರಾವ್ ಹಾಕಿದರು. 4 ಬಾರಿ ಸೋತ ನಿಮ್ಮನ್ನು ನಮ್ಮ ಕ್ಷೇತ್ರದಿಂದ ಆಯ್ಕೆ ಮಾಡುವ ಮೂಲಕ ರಾಜಕೀಯ ಪುನರ್ಜನ್ಮ ನೀಡಿದ್ದೇವೆ. ಆದರೆ, ಈ ಭಾಗದ ಜನರಿಗೆ ನೀವು ನೀಡಿರುವ ಕೊಡುಗೆಯಾದರು ಏನು?. ಕಳೆದ 4 ವರ್ಷಗಳಲ್ಲಿ ನೀವು ಕ್ಷೇತ್ರದ ಅಭಿವೃದ್ಧಿಗಾಗಿ ಯಾವ ಯೋಜನೆಗಳನ್ನು ಅನುಷ್ಠಾನ ಮಾಡಿಸಿದ್ದೀರಿ ಎಂದು ಎಂದು ತರಾಟೆಗೆ ತೆಗೆದುಕೊಂಡರು.
ನನ್ನ ಅಭ್ಯಂತರವಿಲ್ಲ: ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಗೆ ನನ್ನ ಅಭ್ಯಂತರವಿಲ್ಲ. ಈ ವಿಚಾರದಲ್ಲಿ ನಾನು ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ ಎಂದು ಕೇಂದ್ರ ಸಚಿವ ಮೊಯ್ಲಿ ತಿಳಿಸಿದರು.
ಪರಮಶಿವಯ್ಯ ವರದಿಗೆ ಸಂಬಂಧಿಸಿದಂತೆ ಯೋಜನೆಯ ತಾಂತ್ರಿಕ ವರದಿ ಸಿದ್ಧಪಡಿಸಲು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು. ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು. ಜಿಪಂ ಸಿಇಒ ನೀಲಾ ಮಂಜುನಾಥ್, ಸದಸ್ಯರಾದ ಎಂ.ವಿ. ಕೃಷ್ಣಪ್ಪ, ಸಾವಿತ್ರಮ್ಮ, ಅಮರಾವತಿ, ತಾಪಂ ಅಧ್ಯಕ್ಷೆ ಮುನಿರತ್ನಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಜನಪ್ಪ, ಮಾಜಿ ಶಾಸಕರಾದ ಎನ್. ಸಂಪಂಗಿ, ಶಿವಾನಂದ ಇದ್ದರು.