ಕ್ಯಾಟ್ಫಿಶ್ ದೊಡ್ಡ ಹೊಂಡ ನಾಶ
ಶಿಡ್ಲಘಟ್ಟ: ವೀರಾಪುರ ಗ್ರಾಮದ ಹೊರವಲಯದ ಗೌಡನ ಕೆರೆ ಅಂಚಿನ ಹಿಪ್ಪುನೇರಳೆ ತೋಟದ ಬಳಿ ನಿಷೇಧಿತ ಕ್ಯಾಟ್ಫಿಶ್(ಆನೆ ಮೀನು) ಸಾಕುತ್ತಿದ್ದ ಹೊಂಡಗಳ ಮೇಲೆ ಸೋಮವಾರ ತಹಸೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಮತ್ತು ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಪಿ.ಬಿ. ಹನುಮಂತಪ್ಪ ನೇತೃತ್ವದ ತಂಡ ದಾಳಿ ನಡೆಸಿ ಸುಮಾರು 20 ಲಕ್ಷ ಮೌಲ್ಯದ ಕ್ಯಾಟ್ಫಿಶ್ಗಳ ದೊಡ್ಡ ಹೊಂಡವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿತು.
ಪಟ್ಟಣದ ಕೂಗಳತೆ ದೂರದಲ್ಲಿರುವ ವೀರಾಪುರ ಗ್ರಾಮದ ಹೊರವಲಯದಲ್ಲಿ ಕುಮಾರ್ ಮತ್ತು ಮೋಹನ ಎಂಬುವವರಿಗೆ ಸೇರಿರುವ ಜಮೀನಿನಲ್ಲಿ ದೊಡ್ಡ ತೊಟ್ಟಿಯನ್ನು ನಿರ್ಮಾಣ ಮಾಡಲಾಗಿತ್ತು. ಶಿಡ್ಲಘಟ್ಟದ ಶ್ರೀನಿವಾಸ್ ಮತ್ತು ಹಯಾತ್ ಎಂಬುವವರು ನಿಷೇಧಿತ ಕ್ಯಾಟ್ಫಿಶ್ಗಳನ್ನು ಅಲ್ಲಿ ಎರಡು ತಿಂಗಳಿನಿಂದ ಸಾಕುತ್ತಿದ್ದರು. ನೀರಿನ ಹೊಂಡಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಮೀನು ಅಥವಾ ರೇಷ್ಮೆ ಹುಳುಗಳನ್ನು ತಿನ್ನಲು ಬರುವ ನಾಯಿಗಳು ಸಾಯುವಂತೆ ವಿದ್ಯುತ್ ತಂತಿಗಳನ್ನು ಕಟ್ಟಿದ್ದರು ಎಂದು ತಿಳಿದುಬಂದಿತ್ತು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಠಾತ್ ದಾಳಿ ನಡೆಸಿದ ತಹಸೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಮತ್ತು ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಪಿ.ಬಿ. ಹನುಮಂತಪ್ಪ ಸ್ಥಳಕ್ಕೆ ಜೆಸಿಬಿಯನ್ನು ಕರೆಸಿ ತೊಟ್ಟಿಗಳನ್ನು ಕಿತ್ತುಹಾಕಿ ನೀರು ಹಾಗೂ ಮೀನುಗಳನ್ನು ಹೊರಗೆ ಬಿಟ್ಟು ನಾಶಪಡಿಸಿದರು.