ಪುರ ಪೊಲೀಸ್ ಠಾಣೆಯಲ್ಲಿ ಕುಂದುಕೊರತೆ ಸಭೆ
ಗೌರಿಬಿದನೂರು: ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯನ್ನು ವಿಧಿಸಿ ಗಡಿಪಾರು ಮಾಡಲಾಗುವುದು ಎಂದು ಆರಕ್ಷಕ ವೃತ್ತ ನಿರೀಕ್ಷಕ ಕೆ. ನಾಗರಾಜ್ ತಿಳಿಸಿದರು. ಗೌರಿಬಿದನೂರು ಪುರ ಠಾಣೆಯಲ್ಲಿ ಕರೆದಿದ್ದ ನಾಗರಿಕರ ಕುಂದುಕೊರತೆಯ ಸಭೆಯನ್ನುದ್ದೇಶಿಸಿ ಮಾತನಾಡಿ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಇದೆ, ದ್ವಿಚಕ್ರ ವಾಹನದಲ್ಲಿ 3 ಜನ ಪ್ರಯಾಣ ಆಟೋದಲ್ಲಿ 15ರಿಂದ 20 ಜನ ಪ್ರಯಾಣ ಮಾಡುತ್ತಿರುವ ಬಗ್ಗೆ ಪುರಸಭೆ ಸದಸ್ಯ ಮಂಜುನಾಥ್, ನರಸಿಂಹ ಮೂರ್ತಿ ಹಾಗೂ ಜಿ. ಬಾಲಾಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಪಿಐ ಅವರು ಒಂದು ವಾರದಲ್ಲಿ ಬದಲಾವಣೆ ತರುವುದಾಗಿ ತಿಳಿಸಿದರು. ವಾಸವಿ ದೇವಸ್ಥಾನ ರಸ್ತೆಯಲ್ಲಿ ಹಾಗೂ ಮಸೀದಿ ರಸ್ತೆಯಲ್ಲಿ ಪ್ರತಿ ನಿತ್ಯ ಜನಸಂದಣೆ ಹೆಚ್ಚು ಸರ್ಕಾರಿ ಶಾಲೆಗೆ ಹೋಗುವ ಮಕ್ಕಳೇ 4ರಿಂದ 5 ಸಾವಿರ ಇದ್ದಾರೆ. ಅವರು ಶಾಲೆಗೆ ಹೋಗಲು ಸಾಧ್ಯವಾಗದ ರೀತಿಯಲ್ಲಿ ಲಾರಿಗಳನ್ನು ಅಡ್ಡ ನಿಲ್ಲಿಸಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಿ. ಕಳೆದ 15 ವರ್ಷದಿಂದ ಯಾವ ಪೊಲೀಸ್ ಅಧಿಕಾರಿಯೂ ಕ್ರಮಕೈಗೊಂಡಿಲ್ಲ. ಕೇವಲ ಹೇಳಿಕೆಗೆ ಸೀಮಿತ ಗಳಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಿಪಿಐ ನಾಗರಾಜ್, ವರ್ತಕರು ಇನ್ನುಮುಂದೆ ಬೆಳಗ್ಗೆ 9 ಗಂಟೆ ಒಳಗೆ ಸರಕುಗಳನ್ನು ಲಾರಿಗಳಿಂದ ಸಾಗಿಸಿಕೊಳ್ಳಬೇಕು. ಈ ಬಗ್ಗೆ 2 ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಪುರಸಭೆ ಸದಸ್ಯ ರಮೇಶ್ ಮಾತನಾಡಿ, ಪಟ್ಟಣದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಂತರ್ಜಲ ಕುಸಿದಿದೆ, ಇಂದಿಗೂ ಮರಳು ಲೂಟಿ ನಿರಂತರವಾಗಿ ನಡೆಯುತ್ತಲೇ ಇದೆ. ತಕ್ಷಣವೇ ಕ್ರಮಕೈಗೊಳ್ಳಿ. ತಪ್ಪಿದರೆ ಜನ ನೀರಿಲ್ಲದೆ ಸಾವನ್ನಪ್ಪಬೇಕಾದ ಪರಿಸ್ಥಿತಿ ಒದಗಿ ಬರಲಿದೆ ಎಂದು ಎಚ್ಚರಿಸಿದರು.