ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರಿಗೆ ಪರಿಹಾರಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

Rashmi Kasaragodu
Updated On : 8 Oct 2013, 1:05 am

ಕನ್ನಡಪ್ರಭ ವಾರ್ತೆ    ಕೋಲಾರ    ಅ.7
ಕಾಲುಬಾಯಿ ಜ್ವರದಿಂದ ಜಿಲ್ಲೆಯಲ್ಲಿ ನೂರಾರು ಜಾನುವಾರುಗಳು ಸತ್ತಿರುವುದರಿಂದ ಹೈನುಗಾರಿಕೆಯನ್ನು ಅವಲಂಬಿತ ರೈತರು ನಷ್ಟಕ್ಕೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕಾಲುಬಾಯಿ ರೋಗ ಉಲ್ಬಣಗೊಳ್ಳುವ ಮುಂಚೆಯೇ ಪಶು ವೈದ್ಯ ಇಲಾಖೆಯವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಲ್ಲಿ ರೈತರು ಜಾನುವಾರುಗಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ವೈ. ಸಂಪಂಗಿ ಇನ್ನಿತರರು ಆರೋಪಿಸಿದರು.
ಗುಣಮಟ್ಟದ ಔಷಧಿ ನೀಡಿ: ಕಾಲುಬಾಯಿ ಜ್ವರದಿಂದ ಬಳಲಿರುವ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆಯಿಂದ ಗುಣಮಟ್ಟದ ರೋಗ ನಿರೋಧಕ ಔಷಧಿಗಳನ್ನು ನೀಡದಿರುವುದು ಸಹ ಜಾನುವಾರುಗಳ ಸಾವಿಗೆ ಕಾರಣವಾಗಿದೆ. ಕಳಪೆ ಔಷಧಿ ನೀಡಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು, ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಭರಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಅನೇಕ ಕಡೆ ಇನ್ನೂ ಕಾಲುಬಾಯಿ ರೋಗ ನಿಯಂತ್ರಕ್ಕೆ ಬಂದಿಲ್ಲ, ರೈತರು ಜಾನುವಾರುಗಳನ್ನು ಉಳಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ, ಗುಣಮಟ್ಟದ ಔಷಧಿ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಜಿಲ್ಲಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದರು.
ರೈತರ ಸಮಸ್ಯೆ ನಿವಾರಣೆ ಸಂಬಂಧ ಬಿಜೆಪಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲು ಕಾಲಾವಕಾಶ ನೀಡಬೇಕು, ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಿದರು.
25 ಲಕ್ಷ ಬಿಡುಗಡೆ: ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದ ಸಂದರ್ಭದಲ್ಲೇ ಕಾಲುಬಾಯಿ ಜ್ವರದಿಂದ ಸತ್ತಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ.
ಇನ್ನು ಗುಣಮಟ್ಟದ ಔಷಧಿಗಳ ಖರೀದಿ ಹಾಗೂ ಕಾಲುಬಾಯಿ ಜ್ವರ ತಡೆಯಲು ಬೇಕಾದ ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ನಿಧಿಯಿಂದ ಪಶು ಸಂಗೋಪನಾ ಇಲಾಖೆಗೆ ಜಿಲ್ಲಾಧಿಕಾರಿ ಕಚೇರಿಯಿಂದ 25 ಲಕ್ಷ ಬಿಡುಗಡೆ ಮಾಡಲಾಗಿದ್ದು, ಅಧಿಕಾರಿಗಳು ಜಾನುವಾರುಗಳಿಗೆ ರಕ್ಷಣೆ ನೀಡಲು ಮುಂದಾಗಿದ್ದಾರೆಂದರು. ಜಿಲ್ಲಾ ಪಂಚಾಯಿತಿಯಿಂದಲೂ 20 ಲಕ್ಷ ನೀಡಲಾಗಿದೆ.
ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಜಾನುವಾರುಗಳ ಜೀವ ಉಳಿಸುವಂತೆ ಸೂಚಿಸಲಾಗಿದೆ. ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ನೀಡುವುದಾಗಿಯೂ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ, ಮಾಜಿ ಶಾಸಕರಾದ ಎಂ. ನಾರಾಯಣಸ್ವಾಮಿ, ವೈ. ಸಂಪಂಗಿ, ಜಿ.ಪಂ. ಸದಸ್ಯ ಎಂ.ಎಸ್. ಆನಂದ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೆಂಬೋಡಿ ನಾರಾಯಣಸ್ವಾಮಿ, ಜಿಲ್ಲಾ ಖಜಾಂಚಿ ಮು. ರಾಘವೇಂದ್ರ, ವಕ್ತಾರ ಶಿಳ್ಳಂಗೆರೆ ಮಹೇಶ್, ಪ್ರಧಾನ ಕಾರ್ಯದರ್ಶಿ ಮಾಗೇರಿ ಎಂ.ಪಿ. ನಾರಾಯಣಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಕೆ.ಎಸ್. ರಾಜೇಂದ್ರ, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ನೀಲಿ ಕೈ ಶಂಕರ್, ಮಹಿಳಾ ಮೋರ್ಚಾದ ಮುಖಂಡರಾದ ಮಮತಾ, ವಿಜಯಲಕ್ಷ್ಮೀ, ನಗರ ಘಟಕದ ಅಧ್ಯಕ್ಷ ಜಯಂತಿಲಾಲ್, ಜಿಲ್ಲಾ ಉಪಾಧ್ಯಕ್ಷ ಎಂ. ಲಕ್ಷ್ಮಣಗೌಡ, ಅಲ್ಪಸಂಖ್ಯಾತರ ವಿಭಾಗದ ಮುಖಂಡ ಜಾಮೀಲ್ ಖಾನ್, ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement