ಶಾಸಕರಿಂದ ಜನರಿಗೆ ತಪ್ಪು ಮಾಹಿತಿ: ಟೀಕೆ
ಕೋಲಾರ: ಬಿಜೆಪಿ ಸರ್ಕಾರವಿದ್ದಾಗ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಕಾಮಗಾರಿಗಳನ್ನು ತಾನು ಮಂಜೂರು ಮಾಡಿಸಿರುವುದಾಗಿ ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಶಾಸಕ ಕೆ.ಎಂ. ನಾರಾಯಣಸ್ವಾಮಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಟೀಕಿಸಿದರು. ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಶಾಸಕರಾಗಿದ್ದಾಗ ಬಿಜೆಪಿ ಸರ್ಕಾರದಿಂದ ಬಂಗಾರಪೇಟೆ ಕ್ಷೇತ್ರದ ಅಭಿವೃದ್ಧಿಗೆ 52ರಿಂದ 58 ಕೋಟಿ ಮಂಜೂರಾಗಿತ್ತು. ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿ ಆಗಿದ್ದರಿಂದ ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಲು ಆಗಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಂಗಾರಪೇಟೆ ಕ್ಷೇತ್ರಕ್ಕೆ ನಯಾಪೈಸೆ ಬಿಡುಗಡೆ ಆಗದಿದ್ದರೂ ಈ ಹಿಂದೆಯೇ ಮಂಜೂರಾಗಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಾಸಕ ನಾರಾಯಣಸ್ವಾಮಿ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು. ಹಾಲಿ ಶಾಸಕರು ನನ್ನ ಕಾಲದಲ್ಲಿ ಮಂಜೂರು ಆಗಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಅತ್ತಿಗಿರಿಕೊಪ್ಪ, ಮುಷ್ಟರಹಳ್ಳಿ ಸೇರಿದಂತೆ ಇನ್ನಿತರ ಕೆರೆಗಳ ಅಭಿವೃದ್ಧಿಗೆ 2012ರ ನವೆಂಬರ್ 31ರಂದೇ ಅನುಮೋದನೆ ಸಿಕ್ಕಿದೆ. ಆಗ ನಾನು ಶಾಸಕನಾಗಿದ್ದೆ. ಹಾಲಿ ಶಾಸಕರು 2013ರ ಜೂನ್ 1ರಂದು ಶಾಸಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವಸ್ತುಸ್ಥಿತಿ ಹೀಗಿದರೂ ಪುಕ್ಕಟೆ ಪ್ರಚಾರಕ್ಕಾಗಿ ಮತ್ತೆ ಕೆರೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಿರುವುದಲ್ಲದೆ, ಸಣ್ಣ ನೀರಾವರಿ ಸಚಿವರು ಕೆರೆಗಳ ಅಭಿವೃದ್ಧಿಗೆ ಅನುಮೋದನೆ ನೀಡಿರುವುದಾಗಿ ಸುಳ್ಳು ಹೇಳಿದ್ದಾರೆಂದು ದೂರಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡುವಾಗ ಈ ಹಿಂದಿನ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವುದಾಗಿ ಹೇಳಿದಲ್ಲಿ ಜನತೆಗೆ ಸತ್ಯ ಗೊತ್ತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬಿಜೆಪಿ ಮುಖಂಡರಾದ ನಾಗಪ್ರಕಾಶ್, ವಿಜಯಲಕ್ಷ್ಮೀ, ಮೋಹನ್ಮೂರ್ತಿ, ರಮೇಶ್, ತಂಬಿಹಳ್ಳಿ ಮುನಿಯಪ್ಪ, ನಾರಾಯಣಗೌಡ, ಮಾರ್ಕಂಡೇಗೌಡ, ಸೀತರಾಮಪ್ಪ ಇನ್ನಿತರರು ಇದ್ದರು.