ಕೃಷಿ ಜೊತೆ ಉಪ ಕಸುಬು ಮಾಡಿ
ಮುಳಬಾಗಲು: ಹೆಚ್ಚಿನ ವಕ್ಕಲಿಗರು ಕೃಷಿ ಮೇಲೆ ಅವಲಂಭಿತರಾಗಿದ್ದು, ಕೃಷಿ ಇಂದು ಲಾಭದಾಯಕ ಉದ್ಯಮವಾಗದ ಕಾರಣ ಬೇರೆ ಕಸುಬುಗಳನ್ನು ಮಾಡಲು ಮಾಲೂರು ಶಾಸಕ ಮಂಜುನಾಥಗೌಡ ಕರೆ ನೀಡಿದರು.
ಪಟ್ಟಣದ ಶಿವಕೇಶವನಗರದ ವಕ್ಕಲಿಗರ ಭವನದಲ್ಲಿ ವಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ವಕ್ಕಲಿಗ ಜನಾಂಗದ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಕ್ಕಲಿಗರಿಗೆ ಕೃಷಿ ಜೀವನಾಧಾರವಾಗಿದ್ದು ಮಳೆ ಪ್ರಮಾಣ ಹಾಗೂ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಸಿಗದೆ ಪರ್ಯಾಯ ವ್ಯವಸ್ಥೆಯತ್ತ ಗಮನ ಹರಿಸಬೇಕು ಎಂದರು. ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಮಾತನಾಡಿ, ಜನಾಂಗದ ರಾಜಕೀಯ ಮುಖಂಡರು ರಾಜಕೀಯ ಬದಿಗಿಟ್ಟು ವಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದರು. ಕೋಲಾರ ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ. ಶಂಕರಪ್ಪ ಮಾತನಾಡಿದರು. ಕಾರ್ಯಕ್ರಮವನ್ನು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ್ ಉದ್ಫಾಟಿಸಿದರು. ವಕ್ಕಲಿಗ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಚ್. ವೆಂಕಟಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಲೂರು ಶಾಸಕ ಮಂಜುನಾಥಗೌಡ, ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಮತ್ತು ಬಿಸೇಗೌಡರನ್ನು ಸನ್ಮಾನಿಸಲಾಯಿತು.