ಧಾರಾಕಾರ ಮಳೆ; ತತ್ತರಿಸಿದ ಜನ
ಚಿಕ್ಕಬಳ್ಳಾಪುರ: ಮಂಗಳವಾರ ಮುಂಜಾನೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆ ನಗರದ ಜನರನ್ನು ಹಿಂಡಿ ಹಿಪ್ಪೆ ಮಾಡಿತು. ನಗರದಲ್ಲಿ ರಸ್ತೆ ಚರಂಡಿ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಎತ್ತಿ ತೋರಿಸಿತು.
ನಗರದ ಯಾವುದೇ ಚರಂಡಿಗಳಲ್ಲೂ ಮಳೆಯ ನೀರು ಸರಿಯಾಗಿ ಹರಿಯಲೇ ಇಲ್ಲ. ಬದಲಿಗೆ ಚರಂಡಿ ನೀರಿನ ಕಸ ರಸ್ತೆಯ ಮೇಲೆಲ್ಲಾ ಹರಿದು ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗಿತು. ಜತೆಗೆ ಚರಂಡಿಗಳ ಕೊಳಕು ಮಣ್ಣನ್ನು ತಂದು ರಸ್ತೆಯಲ್ಲಿ ನಡೆಯಲು ಸಾಧ್ಯವಾಗದ ವಾತಾವರಣ ನಿರ್ಮಾಣ ಮಾಡಿತು. ಇದರಿಂದ ಮಧ್ಯಾಹ್ನದವರೆಗೂ ನಗರದಲ್ಲಿ ಸಂಚಾರದ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತು.
ಅದೇಗೆ ಇರಬೇಕು: ನಗರದ ನಕ್ಕಲು ಕುಂಟೆ(ಶಾಂತಿನಗರದ)ನಿವಾಸಿಗಳೆಲ್ಲರೂ ಮಂಗಳವಾರ ನರಕ ಅನುಭವಿಸಿದರು. ಆಯಾಗಿ ನಿದ್ದೆ ಮಾಡುತ್ತಿರುವವರನ್ನು ಮುಂಜಾವ ಸರಿ ಸುಮಾರು ಎರಡು ಗಂಟೆಗೆಲ್ಲಾ ವರುಣರಾಯ ಎಬ್ಬಿರಿಸಿದ. ಮನೆಗೇ ನುಗ್ಗಿ ದವಸಧಾನ್ಯ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಸಾಮಗ್ರಿಗಳನ್ನು ಹಾಳು ಮಾಡಿದ. ಪ್ರಮುಖವಾಗಿ ಎರಡು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮನೆಗೆ ನಾಲ್ಕೈದು ಅಡಿ ಎತ್ತರದವರೆಗೂ ತುಂಬಿದ್ದ, ಚರಂಡಿ ಕೊಳಕಿನ ಮಿಶ್ರಣದ ಹಿನ್ನೆಲೆಯಲ್ಲಿ ದುರ್ವಾಸನೆಯಿಂದ ಕೂಡಿದ್ದ ನೀರನ್ನು ಹೊರಗೆ ಹಾಕುವಷ್ಟರಲ್ಲಿ ಅವರಿಗೆ ಸಾಕಾಗಿ ಹೋಗಿತ್ತು.
ನಗರಸಭೆ ಅಧಿಕಾರಿಗಳಿಗೆ ಬಡವರ ನೋವಿನ ಬಗ್ಗೆ ಕಾಳಜಿ ಇದೆಯಾ ಪ್ರತಿ ವರ್ಷ ಬಂದು ಏನೋ ಒಂದನ್ನು ಹೇಳಿಕೊಂಡು ಹೋಗುತ್ತಾರೆ. ಇಲ್ಲಿನ ಜನರ ಸಮಸ್ಯೆ ಬಗೆಹರಿಸಬೇಕೆಂಬ ಯೋಚನೆ ಮಾಡುವುದಾದರೂ ಬೇಡವಾ ಚರಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ನೀರು ಹರಿಯದೇ ಕಸ ತುಂಬಿದೆ. ಕೊಳಕು ನೀರು ಮನೆಗೆ ನುಗ್ಗಿದಾಗ ನಾವು ಯಾವ ರೀತಿ ಇರಬೇಕು. ಮಕ್ಕಳ ಪರಿಸ್ಥಿತಿ ಯೋಚನೆ ಮಾಡಿ ಎಂದು ವಿಷಾದ ವ್ಯಕ್ತಪಡಿಸಿದರು.
ಕೋತಿಗಳ ಮಾರಣ ಹೋಮ: ಕೇವಲ ನಕ್ಕಲಕುಂಟೆ ಪ್ರದೇಶ ಮಾತ್ರವಲ್ಲ, ಮಂಗಳವಾರ ನಗರದ ಎಲ್ಲೆಡೆಯೂ ಇದೇ ದುಸ್ಥಿತಿ ಕಂಡು ಬಂತು. ನಗರದ ದರ್ಗಾಮೊಹಲ್ಲಾ ರಸ್ತೆ, ಕೋಟೆ, ಸಾಧುಮಠ, ಅಂಬೇಡ್ಕರ್ ಕಾಲೋನಿ, ಇಂದಿರಾ ನಗರ, ಬಾಪೂಜಿ ನಗರ, ಭಗತ್ಸಿಂಗ್ ನಗರ, ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ರಸ್ತೆ, ಹೊಸ ಬಸ್ಸು ನಿಲ್ದಾಣ, ಕಾರ್ಪೋರೇಷನ್ ಬ್ಯಾಂಕ್, ರೇಷ್ಮೆಗೂಡು ಮಾರುಕಟ್ಟೆ, ಶಾಂತಿ ಸಾಗರ ಹೋಟೆಲ್ ರಸ್ತೆ... ಹೀಗೆ ಎಲ್ಲೆಡೆಯೂ ಚರಂಡಿ ನೀರು ಹರಿಯದೇ ರಸ್ತೆಯಲ್ಲಿ ನಿಂತುಕೊಂಡಿತ್ತು.
ನಗರ ಪ್ರದೇಶಗಳ ಅನೇಕ ಕಡೆ ಸಣ್ಣ ಕೆರೆ ಕುಂಟೆಗಳು ನಿರ್ಮಾಣವಾಗಿದ್ದವು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಹಿಳಾ ಕಾಲೇಜು ನದಿಯ ದಡದಲ್ಲಿವೆ ಎನ್ನುವಂತೆ ಕಂಡು ಬಂದವು. ಶಾಂತಿ ನಗರ ಸೇರಿದಂತೆ ಅಲ್ಲಲ್ಲಿ ಮನೆಗಳು ಮಳೆಗೆ ಕುಸಿದು ಬಿದ್ದಿದ್ದು ಭಗತ್ ಸಿಂಗ್ ನಗರದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋವಿನ ಕಾಂಪೌಂಡ್ ಕುಸಿದು ಬಿದ್ದು ಎರಡು ಕೋತಿಗಳನ್ನು ಬಲಿ ತೆಗೆದುಕೊಂಡಿತು. ಇನ್ನೂ ಹಲವು ಕೋತಿಗಳು ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯರು ಪಶು ವೈದ್ಯರ ಆಸ್ಪತ್ರೆಗೆ ಕರೆದೊಯ್ದು ಹೋಗಿ ಚಿಕಿತ್ಸೆ ಕೊಡಿಸಿದರು.
ಜನರ ಆಕ್ರೋಶ: ಸರ್ಕಾರದ ಕೋಟ್ಯಂತರ ರು.ೂ ಅನುದಾನದಲ್ಲಿ ಕಳಪೆ ಚರಂಡಿ ಕಾಮಗಾರಿ ಕೈಗೊಂಡು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತಿರುವ ನಗರಸಭೆ ವಿರುದ್ಧ ಜನರು ಎಲ್ಲೆಡೆ ಕಿಡಿಕಾರಿದರು.
ನಗರದ ಅಂಬೇಡ್ಕರ್ ಕಾಲೋನಿಯ ರೈಲ್ವೆ ಮೇಲ್ಸೇತುವೆಯಡಿ ಚರಂಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ತುಂಬಿ ಹೋಗಿದ್ದರಿಂದ ಸಂಚರಿಸಲು ಸಾಧ್ಯವಾಗದೇ ಪರದಾಡಿ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ದರ್ಗಾ ಮೊಹಲ್ಲಾ ಹಿಂಭಾಗದಲ್ಲಿ ಒಳಚರಂಡಿಯ ಗಲೀಜು ಮನೆಯ ಮುಂಭಾಗಕ್ಕೆ ಬಂದು ದುರ್ವಾಸನೆ ಬೀರುತ್ತಿದ್ದರಿಂದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಆದರೆ, ಅಧಿಕಾರಿಗಳು ತಮ್ಮ ಎಂದಿನಂತೆ ಭರವಸೆ ನೀಡುವ ವರಸೆಯನ್ನು ನಿಲ್ಲಿಸಲಿಲ್ಲ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಳೆ ಸುರಿದಿದ್ದು ಕೆಲ ರೈತರಿಂದ ಆತಂಕ, ಜತೆಗೆ ಖುಷಿ ವ್ಯಕ್ತವಾಯಿತು.