ಪರಭಾಷಾ ಬ್ಯಾನರ್, ಫ್ಲೆಕ್ಸ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ
ಕೆಜಿಎಫ್: ಪರಭಾಷಾ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ತೆರವುಗೊಳಿಸಬೇಕು ಹಾಗೂ ಇನ್ನು ಮುಂದೆ ಪರಭಾಷಾ ಫ್ಲೆಕ್ಸ್ಗಳಿಗೆ ಅನುಮತಿಯನ್ನು ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಅವರ ನೇತೃತ್ವದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ಕೆಜಿಎಫ್ ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಖಾಸಗಿ ಕಾರ್ಯಕ್ರಮಗಳಿಗೆ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ತಮಿಳು ಹಾಗೂ ಆಂಗ್ಲ ಭಾಷೆಯಲ್ಲಿ ಹಾಕಲಾಗುತ್ತಿದೆ ಇದನ್ನು ಖಂಡಿಸಿ ನಗರದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಹಾಗೂ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದರೂ ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಗರದಲ್ಲಿ ಅಳವಡಿಸುವ ಬ್ಯಾನರ್ಗಳಲ್ಲಿ ಹಾಗೂ ಫ್ಲೆಕ್ಸ್ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಹಾಕಬೇಕು ಇಲ್ಲವಾದಲ್ಲಿ ನಗರಸಭೆ ವತಿಯಿಂದ ಯಾವುದೇ ಅನುಮತಿಯನ್ನು ನೀಡಬಾರದು, ಒಂದು ವೇಳೆ ಕನ್ನಡಭಾಷೆ ಇಲ್ಲದ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ಕೂಡಲೇ ನಗರಸಭೆ ತೆರವುಗೊಳಿಸಬೇಕು ಮತ್ತು ಅಂತಹವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಕರವೇ ಕಾರ್ಯಕರ್ತರು ಪರಭಾಷೆಯಲ್ಲಿ ಹಾಕಿರುವ ಬ್ಯಾನರ್, ಫ್ಲೆಕ್ಸ್ಗಳನ್ನು ಹರಿದು ಬೆಂಕಿಯಿಟ್ಟು ಸುಡಲಾಗುತ್ತದೆ ಎಂದು ಎಚ್ಚರಿಸಿ ಮನವಿ ಪತ್ರವನ್ನು ಪೌರಾಯುಕ್ತ ವಿ. ಬಾಲಚಂದ್ರ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ನಂಜುಂಡಪ್ಪ, ಜಿಲ್ಲಾ ಉಪಾಧ್ಯಕ್ಷ ವಿ.ಎಸ್. ಪ್ರಕಾಶ್, ನಗರ ಅಧ್ಯಕ್ಷ ಸುಬ್ರಮಣಿ, ಮಹಿಳಾ ಅಧ್ಯಕ್ಷಣಿ ಪಲ್ಲವಿ, ಲತಾಬಾಯಿ, ಕೋದಂಡರಾಮಯ್ಯ, ಎಸ್.ಎಂ. ರಾಜು, ಕೋಲೇರಿನಾಗರಾಜ್, ತಿಮ್ಮರಾಜು, ನಾರಾಯಣರೆಡ್ಡಿ, ವೆಂಕಟರಾಮರೆಡ್ಡಿ, ವಿಮಲಾಕುಮಾರಿ, ಕೆ. ಗೋಪಾಲ್ ಮತ್ತಿತರರು ಹಾಜರಿದ್ದರು.