ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪುರಸಭೆ ಅಧಿಕಾರಿಗಳಿಗೆ ತರಾಟೆ

Rashmi Kasaragodu
Updated On : 9 Oct 2013, 12:46 pm

ಮಾಲೂರು: ಪುರಸಭೆಯಲ್ಲಿ ಗುತ್ತಿಗೆ ಕಾರ್ಮಿಕರ ಭವಿಷ್ಯ ನಿಧಿ ಹಣವನ್ನು ಕಾರ್ಮಿಕರಿಗೆ ನೀಡದೆ ನೇರವಾಗಿ ಗುತ್ತಿಗೆದಾರರಿಗೆ ಸೇರುತ್ತಿರುವುದನ್ನು ಪ್ರಶ್ನಿಸಿದ ರಾಜ್ಯ ಉಪಲೋಕಾಯುಕ್ತ ಸುಭಾಷ್ ಅಡಿ ಅವರು ಪುರಸಭೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ತಾಲೂಕಿಗೆ ಉಪಲೋಕಾಯುಕ್ತ ಭೇಟಿ ನೀಡಿದ ವೇಳೆಯಲ್ಲಿ ನಡೆದಿದೆ.
  ಪಟ್ಟಣದ ಶುಚಿತ್ವ ಕಾಪಾಡಲು ಇಲ್ಲಿನ ಪುರಸಭೆ ಗುತ್ತಿಗೆದಾರ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗಿಸದೆ ಅವರ ಪಿಎಫ್ ಫಂಡ್‌ನ್ನು ಗುತ್ತಿಗೆದಾರರಿಗೆ ನೀಡುತ್ತಿರುವುದನ್ನು ದಾಖಲೆ ಪರಿಶೀಲಿಸಿದ ನಂತರ ಪ್ರಶ್ನಿಸಿದ ಉಪಲೋಕಾಯುಕ್ತರು ಪುರಸಭೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಪ್ರತಿ ಕಾರ್ಮಿಕರಿಗೂ ಅವರ ಹೆಸರಿನಲ್ಲಿ ಪ್ರಾವಿಡೆಂಟ್ ಫಂಡ್ ಸೌಲಭ್ಯ ನೀಡುವವರಿಗೂ ಗುತ್ತಿಗೆ ಕಾರ್ಮಿಕರ ಫೈಲನ್ನು ಪುರಸ್ಕರಿಸದಂತೆ ಸಹಾಯಕ ಜಿಲ್ಲಾಧಿಕಾರಿ ವಿಜಯ ಕುಮಾರ್ ರವರಿಗೆ ಆದೇಶಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಐಟಿಸಿ ಕಂಪನಿಯ ಕಾರ್ಖಾನೆಯ ಕಾಮಗಾರಿಯಲ್ಲಿ ಸಾವಿರಾರು ಕಾರ್ಮಿಕರ ಕೆಲಸ ಮಾಡುತ್ತಿದ್ದು, ಅವರೆಲ್ಲ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ್ದಾರೆಯೇ ಎಂಬ ಪ್ರಶ್ನೆಗೆ ಐಟಿಸಿ ಕಾರ್ಖಾನೆ ಕಟ್ಟಡ ಕಾಮಗಾರಿಯಲ್ಲಿ 186 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು,ಅವರಲ್ಲಿ 86 ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿದ್ದು,ಉಳಿದವರು ಹೊಸದಾಗಿ ಬಂದಿರುವ ಹಿನ್ನೆಲೆಯಲ್ಲಿ ಈ ವಾರದಲ್ಲಿ ಹೆಸರು ನೋಂದಾವಣೆ ಕಾರ್ಯ ಮಾಡಲಾಗುವುದು ಎಂಬ ಕಾರ್ಮಿಕ ನಿರೀಕ್ಷಕ ರಾಮಕೃಷ್ಣರ ಮಾತನ್ನು ಒಪ್ಪದ ಉಪಲೋಕಾಯುಕ್ತ ರವರು ಅಲ್ಲಿ ಸಾವಿರಾರು ಕಾರ್ಮಿಕರ್ತರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು,ಅದರ ನೈಜ ವರದಿ ನೀಡುವಂತೆ ಆದೇಶಿಸಿದರು.ಬ್ಯಾಲಹಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಿಸದೆ ಸಿಮೆಂಟ್ ರಸ್ತೆಯನ್ನು ಅತಿ ಎತ್ತರವಾಗಿ ನಿರ್ಮಿಸಲಾಗಿದ್ದು, ಇದರಿಂದ ರಸ್ತೆ ಮೇಲೆ ಬಿದ್ದ ಮಳೆ ನೀರು ಮನಗಳಿಗೆ ನುಗುತ್ತಿದೆ ಎಂದು ಗ್ರಾಮಸ್ಥರ ಆರೋಪ ಹಿನ್ನೆಲೆಯಲ್ಲಿ ಜಿ.ಪಂ.ಎಇಇ ಬದ್ರಿನಾಥ್ ರವರನ್ನು ತರಾಟೆ ತೆಗೆದುಕೊಂಡು ಅವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸುವುದು ಬಿಟ್ಟು,ಸಾರ್ವಜನಿಕರ ಹಣ ಪೋಲಾಗದಂತೆ ಚರಂಡಿ ನಿರ್ಮಿಸಿ ನಂತರ ರಸ್ತೆಯನ್ನು ವೈಜ್‌ಞಾನಿಕವಾಗಿ ನಿರ್ಮಿಸಿ ಎಂದರು.
ಜಿ.ಪಂ. ಸಿಇಓ ಜುಲ್ಫಿಕರ್‌ವುಲ್ಲಾ, ಎಸ್ಪಿ ರಾಮನಿವಾಸ್‌ಸಾಪೆಟ್, ಸಹಾಯಕ ಜಿಲ್ಲಾಧಿಕಾರಿ ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕಿ ಶಕುಂತಲ, ಲೋಕಾಯುಕ್ತ ನಾಗರಾಜ್,ಇನ್ಸ್‌ಪೆಕ್ಟರ್ ಅಶ್ವಥ್‌ನಾರಾಯಣ್, ಲೋಕಾಯುಕ್ತ ನ್ಯಾಯಾಧೀಶ ನೇಗಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಲೀಲಾವತಿ, ತಹಸೀಲ್ದಾರ್ ಡಾ.ಸುಧಾ, ಎಇಇ ಬದ್ರಿನಾಥ್, ಮುಖ್ಯಾಧಿಕಾರಿ ರೇಣುಕಾ, ಸಿಡಿಪಿಓ ಸಾದಿಕ್ ಕುರೇಶ್, ಜಿಲ್ಲಾ ರೂಪಣಾಧಿಕಾರಿ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement