ರಾಜಕಾಲುವೆ ಒತ್ತುವರಿ: ಜಿಲ್ಲಾಧಿಕಾರಿ ಭೇಟಿ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಯಲ್ಲಿಯೇ ರಾಜಕಾಲುವೆ ಒತ್ತುವರಿಯಾಗಿರುವುದು ಕಣ್ಣಿಗೆ ಕಾಣಿಸುತ್ತಿದ್ದರೂ ಈವರೆಗೂ ಗಮನಹರಿಸದೇ ಇದ್ದ ಜಿಲ್ಲಾಡಳಿತ, ಮಂಗಳವಾರ ಸುರಿದ ಧಾರಾಕಾರ ಮಳೆಯ ನೀರು ಹರಿಯದೇ ಅಂಗಡಿ ಮುಂಗಟ್ಟು, ಮನೆಗಳಿಗೆ ನುಗ್ಗಿ ಸಂಕಷ್ಟವನ್ನುಂಟು ಮಾಡಿದ ಮೇಲೆ ಎಚ್ಚೆತ್ತುಕೊಂಡಿದೆ.
ಜಿಲ್ಲಾಧಿಕಾರಿ ವಿಶಾಲ್, ಉಪ ವಿಭಾಗಾಧಿಕಾರಿ ಶಾಂತಲಾ ಮತ್ತು ತಹಸೀಲ್ದಾರ್ ನಟೇಶ್ ಮುಂತಾದ ಅಧಿಕಾರಿಗಳ ತಂಡ ಮಂಗಳವಾರ ಸಂಜೆ ನಗರದ ಶಾಂತಿಸಾಗರ ಹೋಟೆಲ್ ಬಳಿ ಅಕ್ರಮವಾಗಿ ಒತ್ತುವರಿಯಾಗಿರುವ ರಾಜುಕಾಲುವೆ ಪ್ರದೇಶಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿತು.
ಕಂದವಾರ ಕೆರೆಯ ಮಾರ್ಗವಾಗಿ ರಾಜುಕಾಲುವೆಯಲ್ಲಿ ನೀರು ಹಿಂದೆ ಸುಲಭವಾಗಿ ಹರಿದು ಬರುತ್ತಿತ್ತು. ಆದರೆ, ದಿನಗಳೆದಂತೆ ಕೆಲವರು ರಾಜುಕಾಲುವೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದು ಈಗ ರಾಜುಕಾಲುವೆಯ ಗುರುತೇ ಇಲ್ಲದಂತೆ ಮಾಡಿದ್ದಾರೆ. ಇದರಿಂದ ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಒಂದೆಡೆಯೇ ತುಂಬಿಕೊಂಡು ಅಂಗಡಿ ಮುಂಗಟ್ಟುಗಳಿಗೆಲ್ಲಾ ನುಗ್ಗಿದ್ದು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಜಿಲ್ಲೆಯಲ್ಲಿ ಹಲವೆಡೆ ರಾಜುಕಾಲುವೆಗಳು ಅಕ್ರಮ ಒತ್ತುವರಿಯಾಗಿವೆ. ಇನ್ನೂ ಕೆರೆಗಳನ್ನು ಬಿಡುತ್ತಿಲ್ಲ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಾಗಿತ್ತು. ಆದರೆ, ನಿರ್ಲಕ್ಷ್ಯ ವಹಿಸಿದ ಪರಿಣಾಮ ಜನರು ತೊಂದರೆ ಅನುಭವಿಸುವಂತಾಗಿದೆ. ಎಲ್ಲೂ ಮಳೆಯ ನೀರು ಸರಿಯಾಗಿ ಹರಿಯುತ್ತಿಲ್ಲ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು, ರಾಜುಕಾಲುವೆಗಳನ್ನು ಖುದ್ದು ಪರಿಶೀಲಿಸಿ ಒತ್ತುವರಿಯಾಗಿರುವುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದರು.
ಈ ಸಂದರ್ಭದಲ್ಲಿ ನಿರ್ದಾಕ್ಷಿಣ್ಯವಾಗಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಶಾಲ್ ಸೂಚನೆ ನೀಡಿದರು.
ಕೆರೆ ಒತ್ತುವರಿ ಆರೋಪ:
ಶಾಸಕರ ಪರೀಶಿಲನೆ
ಚಿಕ್ಕಬಳ್ಳಾಪುರ: ತಾಲೂಕಿನ ಅಂಗಟ್ಟದ ಕೆರೆ ಹಾಗೂ ಕಾಲುವೆಯನ್ನು ಖಾಸಗೀ ವಿಲ್ಲಾ ಸಂಸ್ಥೆ ಒತ್ತುವರಿ ಮಾಡಿಕೊಂಡಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಡಾ.ಕೆ. ಸುಧಾಕರ್, ತಹಸೀಲ್ದಾರ್ ನಟೇಶ್ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನೀಲ ನಕ್ಷೆ ಪರಿಶೀಲಿಸಿದ ಶಾಸಕರು, ಕೂಡಲೇ ಜಮೀನಿನ ಸರ್ವೆ ಮಾಡಿ, ಒತ್ತುವರಿಯಾಗಿದ್ದರೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು. ಕೂಡಲೇ ಅಡ್ಡವಾಗಿ ತಿರುಗಿಸಿರುವ ಕಾಲುವೆಯನ್ನು ನೇರವಾಗಿ ತಿರುಗಿಸಿ ಕೆರೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿ ತಹಸೀಲ್ದಾರ್ಗೆ ಸೂಚಿಸಿದರು.
ಇನ್ನೇನು ಮಳೆಗಾಲ ಮುಗಿಯುತ್ತಾ ಬಂದಿದ್ದು ಕಾಲುವೆ ಒತ್ತುವರಿಯಾಗಿರುವ ಕಾರಣ ಕೆರೆಗೆ ಸರಾಗವಾಗಿ ಹರಿದು ಬರುತ್ತಿಲ್ಲ. ಇದರಿಂದ ಜಾನುವಾರುಗಳಿಗೂ ಕುಡಿವ ನೀರು ಇಲ್ಲದಂತಾಗಿದೆ, ಕೊಳವೆಬಾವಿಗಳು ಬತ್ತಿ ಹೋಗಿವೆ ಎಂದು ಗ್ರಾಮಸ್ಥರು ಶಾಸಕರ ಬಳಿ ಅಳಲು ತೋಡಿಕೊಂಡರು.