'ರಿಯಲ್ ಎಸ್ಟೇಟ್ ದೊರೆಗಳಿಂದ ರಾಜಕೀಯ ಕ್ಷೇತ್ರ ಕಲುಷಿತ'
ಬಂಗಾರಪೇಟೆ: ರಿಯಲ್ ಎಸ್ಟೇಟ್ ದೊರೆಗಳು ರಾಜಕೀಯ ಕ್ಷೇತ್ರಕ್ಕೆ ಬಂದು ರಾಜಕೀಯ ಕ್ಷೇತ್ರವನ್ನು ಕಲುಷಿತಗೊಳಿಸಿ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಇಂತಹ ವಾತಾವರಣದಿಂದ ಜನರು ಮುಕ್ತರಾದಾಗ ಮಾತ್ರ ಸ್ವಚ್ಛ ಆಡಳಿತ ನೀಡಲು ಸಾಧ್ಯ ಎಂದು ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಹೇಳಿದರು.
ಇಲ್ಲಿನ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಇತ್ತೀಚೆಗೆ ಸಂಸ್ಥೆಯಿಂದ ಗೊಬ್ಬರ ಖರೀದಿಸಿ ಅಕಾಲಿಕ ಮರಣ ಹೊಂದಿರುವ ಮಾವಹಳ್ಳಿ ಗ್ರಾಮದ ಚೌಡಪ್ಪರವರ ಕುಟುಂಬಕ್ಕೆ ಇಫ್ಕೋ ಸಂಸ್ಥೆಯಿಂದ ಒಂದು ಲಕ್ಷ ಪರಿಹಾರದ ಚೆಕ್ ವಿತರಿಸಿ ಮಾತನಾಡುತ್ತಾ, ಇಡೀ ಜಿಲ್ಲೆಯಲ್ಲೇ ಅಲ್ಲದೆ ರಾಜ್ಯದೆಲ್ಲೆಡೆ ರಾಜಕೀಯದಲ್ಲಿ ಈಗ ರಿಯಲ್ ಎಸ್ಟೇಟ್ ದೊರೆಗಳದ್ದೇ ಕಾರುಬಾರಾಗಿದೆ. ಇದರಿಂದ ನಿಜವಾದ ಸಮಾಜ ಸೇವಕ ನಾಯಕರಿಗೆ ಬೆಲೆ ಇಲ್ಲದಂತಾಗಿದೆ, ಮತದಾರರಿಗೆ ಹಣ ಮತ್ತು ಉಡುಗೊರೆಗಳ ರುಚಿ ತೋರಿಸಿ ಮತದಾರರನ್ನು ಕಲುಷಿತಗೊಳಿಸಲಾಗಿದೆ ಮತದಾರರು ಆಸೆ ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಚುನಾವಣೆ ವೇಳೆ ಗುರುತಿಸಬೇಕು ಎಂದು ಹೇಳಿದರು.
ಟಿಎಪಿಸಿಎಂಎಸ್ ಸಂಸ್ಥೆ ಈ ಹಿಂದೆ ಅವ್ಯವಹಾರದ ಹಿನ್ನೆಲೆಯಲ್ಲಿ ನಷ್ಟದಲ್ಲಿತ್ತು. ಈಗ ಲಾಭದಲ್ಲಿ ನಡೆಯುತ್ತಿರುವುದನ್ನು ಶ್ಲಾಘಿಸಿ ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಿ ನಂತರ ಎಲ್ಲರೂ ಒಂದಾಗಿ ಸಂಸ್ಥೆಯ್ನು ಬೆಳೆಸಲು ಮುಂದಾಗಬೇಕು ಆಗಲೆ ಸಹಕಾರಿ ಸಂಸ್ಥೆಗಳು ಮುನ್ನಡೆಯಲು ಸಾಧ್ಯವಾಗಿದ್ದು, ರೈತರು ರಸಗೊಬ್ಬರಗಳನ್ನು ಸಹಕಾರಿ ಸಂಸ್ಥೆಗಳಲ್ಲೇ ಖರೀದಿಸಬೇಕು ಮತ್ತು ಇಲ್ಲಿ ಗೊಬ್ಬರ ಖರೀದಿಸಿದ ರೈತರು ಆಕಸ್ಮಿಕದಲ್ಲಿ ಅವರು ಮೃತಪಟ್ಟರೆ ಸಂಸ್ಥೆ ಉಚಿತವಾಗಿ ಪಾಲಿಸಿ ಮಾಡಿಸಿ ಪರಿಹಾರ ನೀಡಲಿದೆ ಪ್ರತಿ ವರ್ಷ ದೇಶದಲ್ಲಿ 20 ಕೋಟಿ ರು.ಗಳನ್ನು ರೈತರಿಗೆ ಇನ್ಯೂರೆನ್ಸ್ ಪಾಲಿಸಿ ಮೂಲಕ ಪಾವತಿ ಮಾಡಲಾಗುತ್ತಿದೆ. ಆದ್ದರಿಂದ ರೈತರು ಎಚ್ಚೆತ್ತುಕೊಂಡು ಮುನ್ನಡೆಯುವಂತೆ ಹೇಳಿದರು.
ಈ ವೇಳೆ ಟಿಎಪಿಸಿಎಂಸ್ ಅಧ್ಯಕ್ಷ ಮಾರ್ಕಂಡೇಗೌಡ, ಮಾಜಿ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ಎಂ. ರಾಮಚಂದ್ರ, ಕಣಿಂಬೆಲೆ ಶ್ರೀನಿವಾಸ್, ರಘುಪತಿಗೌಡ, ಸಿದ್ದನಹಳ್ಳಿ ನಾಗರಾಜ್, ಚಿಕ್ಕಅಂಕಂಡಹಳ್ಳಿ ಪಂ-ಮಾಜಿ ಅಧ್ಯಕ್ಷ ನಾಗರಾಜ್, ಆಲಂಬಾಡಿ ಪಂ-ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಜಗದೀಶ್ ಮತ್ತಿತರರು ಇದ್ದರು.