ವಾಲ್ಮಿಕಿ ಜಯಂತಿ ಅದ್ಧೂರಿ ಆಚರಣೆಗೆ ಕರೆ
ಮುಳಬಾಗಲು: ವಾಲ್ಮಿಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತಾಲೂಕು ಆಡಳಿತಕ್ಕೆ ಶಾಸಕ ಕೊತ್ತೂರು ಜಿ. ಮಂಜುನಾಥ್ ಕರೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ಸಾಲಿನ ಆಚರಣೆಯಲ್ಲಿ ಹಲವಾರು ಲೋಪ ಉಂಟಾಗಿದ್ದು, ಅವು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸಿದರು. ವಾಲ್ಮೀಕಿ ಭವನ ನಿರ್ಮಾಣ ಮಾಡಲು ಕಳೆದ ಮೂರು ವರ್ಷಗಳಿಂದ ಮಾಡುತ್ತಿರುವ ಪ್ರಯತ್ನ ಫಲ ನೀಡಿಲ್ಲವೆಂದು ಮುಖಂಡರು ದೂರಿದರು.
ಭವನ ನಿರ್ಮಾಣಕ್ಕೆ ಅಗತ್ಯವಾದ ಜಮೀನು ನೋಡಿದ್ದು ಅದನ್ನು ಅನುಮೋದನೆಗೆ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ ಎಂದು ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಭರವಸೆ ನೀಡಿದರು. ಮಧ್ಯೆ ಪ್ರವೇಶ ಮಾಡಿದ ಶಾಸಕ ಮಂಜುನಾಥ್ ಸರ್ಕಾರ ಆಕಸ್ಮಾತಾಗಿ ಜಮೀನು ಮಂಜೂರು ಮಾಡದಿದ್ದಲ್ಲಿ ನಿವೇಶನ ಕೊಡಿಸಿ ವಾಲ್ಮೀಕಿ ಭವನ ನಿರ್ಮಿಸಲು ಮುಂದಾಗುಗವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಎಂ.ಪಿ. ವೆಂಕಟರವಣಪ್ಪ, ಗಣೇಶ್, ಸಾತನೂರು ಶ್ರೀನಿವಾಸ್, ಸುರೇಶ್, ಶಂಕರಪ್ಪ, ರಾಮಚಂದ್ರಪ್ಪ, ಶಿರಸ್ತೇದಾರ್ ಬಿ.ಆರ್. ಮುನಿವೆಂಕಟಪ್ಪ ಇದ್ದರು.