ಸಾವಿರಾರು ಜಾನುವಾರು ಸತ್ತ ಮೇಲೆ ಎಚ್ಚೆತ್ತುಕೊಂಡ ಪಶುಸಂಗೋಪನಾ ಇಲಾಖೆ
ಕೆಜಿಎಫ್: ಪಶುಸಂಗೋಪನಾ ಇಲಾಖೆ ಮತ್ತು ಹಾಲು ಒಕ್ಕೂಟ ಸಂಘ ಮಳೆಗಾಲ ಆರಂಭಕ್ಕೂ ಮುನ್ನ ರಾಸುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕುವುದು ವಾಡಿಕೆ. ಇದಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವೂ ಇದ್ದು ವರ್ಷಕ್ಕೆ ಎರಡು ಬಾರಿ ಕಾಲುಬಾಯಿ ಜ್ವರಕ್ಕೆ ಫೆಬ್ರವರಿ ಮತ್ತು ಆಗಸ್ಟ್‌ನಲ್ಲಿ ಲಸಿಕೆ ಹಾಕಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ತಿಳಿಸಿದ್ದಾರೆ. ಆದರೆ ಅವಿದ್ಯಾವಂತ ರೈತ ಸಮುದಾಯದಲ್ಲಿ ಅರಿವು ಮೂಡಿಸಿ ಅಭಿಯಾನದ ರೀತಿ ಲಸಿಕೆ ಕಾರ್ಯಕ್ರಮ ನಡೆಸಬೇಕಾದ ಪಶುಸಂಗೋಪನ ಇಲಾಖೆಯು ಕಾಲುಬಾಯಿ ಜ್ವರದಿಂದ ಸಾವಿರಾರು ಜಾನುವಾರುಗಳು ಸತ್ತ ನಂತರ ಎಚ್ಚೆತ್ತುಕೊಂಡು ಲಸಿಕೆ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
ರೋಗದ ಸೊಂಕು ತಗುಲಿದ ಜಾನುವಾರುಗಳಿಗೆ ಲಸಿಕೆ ನೀಡುವುದರಿಂದ ಗುಣವಾಗುವುದಿಲ್ಲ ಎನ್ನುವುದು ಪಶು ಇಲಾಖೆಗೆ ತಿಳಿದಿದ್ದು, ಜಾನುವಾರುಗಳಲ್ಲಿ ಲಸಿಕೆ ಹಾಕುತ್ತಿರುವ ಕ್ರಮವೂ ಅವೈಜ್ಞಾನಿಕತೆಯಿಂದ ಕೂಡಿದ್ದು ವೈದ್ಯರು ಒಂದು ಹಸುವಿಗೆ ನೀಡಿದ ಸಿರಿಂಜನ್ನು ಮತ್ತೊಂದು ಹಸುವಿಗೆ ಬಳಸಿ ಕಾಯಿಲೆ ಉಲ್ಬಣವಾಗಲು ಕಾರಣ ಎಂದು ಹರಿಕುಮಾರು ತಿಳಿಸಿದರು. ಪಶು ಸಂಗೋಪನಾ ಇಲಾಖೆ ತನ್ನ ವೈಫಲ್ಯವನ್ನು ಮುಚ್ಚಿಡಲು ಲಸಿಕೆ ಹಾಕಿಸಿಕೊಳ್ಳಲು ರೈತರೇ ಮುಂದೆ ಬರುತ್ತಿಲ್ಲ ಎಂಬ ಕಾರಣ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಈ ಇಲಾಖೆಯ ಬೇಜವಾಬ್ದಾರಿ ತನದಿಂದ ಇಂದು ಸಾವಿರಾರು ರೈತರು ಬೀದಿಗೆ ಬೀಳಬೇಕಾಗಿದೆ ಬ್ಯಾಂಕ್ ಹಾಗೂ ಖಾಸಗಿಯಾಗಿ ಸಾಲ ಪಡೆದು ಖರೀದಿಸಿದ ಸೀಮೆ ಹಸುಗಳು ಮೃತಪಟ್ಟಿರುವುದರಿಂದ ಅದನ್ನೇ ಜೀವನಾಧಾರವಾಗಿ ನಂಭಿರುವ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಇಂದು ಒಂದು ಹಸುವಿನ ಬೆಲೆ 40-ರಿಂದ 80 ಸಾವಿರ ಬೆಲೆಯಿದ್ದು, ಕೆಎಂಎಫ್ ಪಶು ಇಲಾಖೆ ಕಾಟಾಚಾರಕ್ಕೆಂಬಂತೆ ಕರಪತ್ರ ಮುದ್ರಿಸಿ ರೈತರಿಗೆ ಸರಿಯಾದ ತಿಳಿವಳಿಕೆ ನೀಡದೆ ಜಾರಿಕೊಳ್ಳುತ್ತಿದೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಕೋಲಾರ ಜಿಲ್ಲಾದ್ಯಂತ ಸುಮಾರು 4 ಸಾವಿರಕ್ಕೂ ಹೆಚ್ಚು ಸೀಮೆ ಹಸುಗಳು ಕಾಲುಬಾಯಿ ಜ್ವರದ ಸೊಂಕುನಿಂದ ಮೃತಪಟ್ಟಿದ ಹಿನ್ನೆಲೆಯಲ್ಲಿ ರೈತರು ತೀರಾ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಈಗಾಗಲೇ ಮೃತಪಟ್ಟಿರುವ ಹಸುಗಳಿಗೆ ಗರಿಷ್‌ಠಮಟ್ಟ 40 ಸಾವಿರ ರು. ಪರಿಹಾರ ಧನ ನೀಡಬೇಕು, ಹಸುಗಳಿಗೆ ರೈತರು ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ವಿಮೆ ಯೋಜನೆಯಲ್ಲಿ ವಿಮೆಯ ಹಣವನ್ನು ಹಸುವಿನ ಮೌಲ್ಯಕ್ಕೆ ತಕ್ಕಂತೆ ವಿಸ್ತರಿಸಿ ರೈತರ ನೆರವಿಗೆ ಮುಂದಾಗಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ಒತ್ತಾಯಿಸಿದ್ದಾರೆ.