ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಸ್ಪತ್ರೆ ಅವ್ಯವಸ್ಥೆ; ವೈದ್ಯಾಧಿಕಾರಿಗೆ ತರಾಟೆ

Rashmi Kasaragodu
Updated On : 10 Oct 2013, 12:41 pm

ಕಪ್ರ ವಾರ್ತೆ   ಕೋಲಾರ   ಅ.9
ಬಡವರ ದವಾಖಾನೆಯಾದ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯ ನೂನ್ಯತೆಗಳನ್ನು ಗಮನಿಸಿದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಅವರು ವೈದ್ಯಾಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬುಧವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಶೌಚಾಲಯದ ಅವ್ಯವಸ್ಥೆ, ಒಳ ರೋಗಿಗಳ ದೂರು ಹಾಗೂ ಸ್ವಚ್ಛತೆಯ ಕಡೆ ಗಮನ ನೀಡದಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸುಧಾರಣೆ ಮಾಡಲು ಏಕೆ ಆಗುತ್ತಿಲ್ಲವೆಂದು ಸಿಡಿಮಿಡಿಗೊಂಡರು. ಸ್ಥಾನಿಕ ವೈದ್ಯಾಧಿಕಾರಿ ಡಾ. ಜೈನ್ ಅವರು ಸ್ವಚ್ಛತೆಗೆ ಸಿಬ್ಬಂದಿಯ ಕೊರತೆ ಇದೆ. ಆಸ್ಪತ್ರೆಗೆ ಬರುವ ರೋಗಿಗಳಿಗಿಂತ ಅವರನ್ನು ಕರೆತರುವ ಜನರಿಂದ ಶೌಚಾಲಯಗಳ ಸ್ವಚ್ಛತೆಗೆ ಅಡ್ಡಿಯಾಗುತ್ತಿದೆ, ಎಷ್ಟೇ ತಿಳುವಳಿಕೆ ನೀಡಿದರೂ ಸಹಕಾರ ನೀಡುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರತಿದಿನ ಭೇಟಿ ನೀಡಿ: ಇದರಿಂದ ಮತ್ತಷ್ಟು ಕುಪಿತರಾದ ಉಪ ಲೋಕಾಯುಕ್ತರು, ಹೋರಗಿನವರಿಗೆ ಏಕೆ ಪ್ರವೇಶ ನೀಡುತ್ತೀರಾ, ಭದ್ರತಾ ಸಿಬ್ಬಂದಿ ಏನು ಮಾಡುತ್ತಾರೆ, ವೈದ್ಯಾಧಿಕಾರಿಗಳಾದ ತಾವುಗಳು ಆಸ್ಪತ್ರೆಯ ವಿವಿಧ ಭಾಗಗಳಲ್ಲಿ ಪ್ರತಿದಿನ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ನಿಮ್ಮ ಕೈಯಲ್ಲಿ ಆಗದಿದ್ದರೆ, ಮೇಲ್ವಿಚಾರಕರಿಗೆ ಸೂಚನೆ ನೀಡಿ ಕೆಲಸ ಮಾಡಿಸಬಹುದಲ್ಲವೇ ಎಂದು ಪ್ರಶ್ನಿಸಿದರು.
ಕ್ರಮಕ್ಕೆ ಶಿಪಾರಸ್ಸು: ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀರಿನ ವ್ಯವಸ್ಥೆ ಮಾಡಿಲ್ಲ, ರೋಗಿಗಳಿಗೆ ಹೋರಗಿನಿಂದ ಔಷಧಿ ತರುವಂತೆ ಚೀಟಿ ನೀಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ, ಅನೇಕರು ವೈದ್ಯರ ಕಾರ್ಯ ವೈಖರಿ ಬಗ್ಗೆ ದೂರುತ್ತಿದ್ದಾರೆಂದು ಹೇಳಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಬಡ ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಬೇಕೆಂಬ ನಿಯಮವಿದ್ದರೂ ಕೆಲ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿ ಹಣ ಪಡೆಯುತ್ತಿದ್ದಾರೆಂಬ ಮಾಹಿತಿ ಇದ್ದು, ಇನ್ನು ಮುಂದೆ ಜನತೆಯಿಂದ ದೂರು ಕೇಳಿ ಬಂದಲ್ಲಿ ಕ್ರಮಕ್ಕೆ ಶಿಪಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ನಮ್ಮ ಸಂಸ್ಥೆಯ ಅಧಿಕಾರಿಗಳನ್ನು ಆಸ್ಪತ್ರೆಯ ಮೇಲೆ ನಿಗಾ ವಹಿಸುವಂತೆ ಸೂಚಿಸುತ್ತೇನೆ, ಒಂದು ವಾರದಲ್ಲಿ ಸ್ವಚ್ಛತೆ, ನೀರಿನ ವ್ಯವಸ್ಥೆ ಹಾಗೂ ವೈದ್ಯರ ಲೋಪಗಳು ಸರಿ ಹೋಗದಿದ್ದರೆ ತಮ್ಮನ್ನು ಜವಾಬ್ದಾರಿಯನ್ನಾಗಿ ಮಾಡಿ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು. ಜಿಲ್ಲಾ ಸರ್ಜನ್ ಡಾ. ರಮೇಶ್ ಬಾಬು ಗೈರು ಹಾಜರಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅನುದಾನ ದುರುಪಯೋಗ ಮಾಡಿಕೊಂಡರೆ ಬಡವರ ಶಾಪ ತಟ್ಟುತ್ತದೆ ಎಂದು ತಿಳಿಸಿದರು. ಕೋಲಾರ ಲೋಕಾಯುಕ್ತ ಡಿವೈಎಸ್ಪಿ ನಾಗರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement