ಮಳೆಗೆ ಕೆರೆಗಳಲ್ಲಿ ನೀರಿನ ಕಳೆ
ಕೋಲಾರ: ಜಿಲ್ಲೆಯಾಧ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಕೆರೆ-ಕುಂಟೆಗಳಲ್ಲಿ ನೀರು ಕಾಣಲಾರಂಭಿಸಿದೆ.
ಮಾಲೂರು, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದ್ದರೆ, ಕೋಲಾರ ಮತ್ತು ಬಂಗಾರಪೇಟೆಯಲ್ಲಿ ಸಾಧಾರಣ ಮಳೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳಿಗೆ ನೀರು ಸೇರುತ್ತಿದ್ದರೆ, ಬತ್ತಿ ಹೋಗಿದ್ದ ತೆರೆದ ಬಾವಿಗಳು, ಕಲ್ಯಾಣಿಗಳಲ್ಲಿ ನೀರು ಶೇಖರಣೆ ಆಗುತ್ತಿರುವುದರಿಂದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಮಾಲೂರು ತಾಲೂಕಿನ ಬ್ಯಾಲಹಳ್ಳಿಯಲ್ಲಿ ಹೊಲಗಳಿಗೆ ಸಮೀಪದ ಕಾರ್ಖಾನೆಯೊಂದರ ತ್ಯಾಜ್ಯ ತುಂಬಿಸಲು ನಿರ್ಮಿಸಿರುವ ಹೊಂಡದಲ್ಲಿ ಮಳೆ ನೀರು ಸಂಗ್ರಹಣೆಯಾಗಿ ಭರ್ತಿಯಾಗಿರುವುದರಿಂದ ಕೊಳಚೆ ನೀರು ಹರಿದು ಪರಿಸರಕ್ಕೆ ಹಾನಿ ಮಾಡಿರುವುದಲ್ಲದೆ,ರೈತರ ಹೊಲಗಳಿಗೆ ಹರಿದಿರುವುದರಿಂದ ಬೆಳೆ ನಾಶವಾಗಿದೆ.
ಕೋಲಾರ ತಾಲೂಕಿನ ಆರಾಭಿಕೊತ್ತನೂರು ಗ್ರಾಮದಲ್ಲಿ ಕೆರೆಗೆ ನೀರು ಬಂದಿರುವುದಲ್ಲದೆ, ತೆರೆದ ಬಾವಿಗಳು ತುಂಬುವ ಹಂತಕ್ಕೆ ತಲುಪಿವೆ. ಕೋಲಾರದ ಅಮ್ಮೇರಹಳ್ಳಿ, ಕೋಲಾರಮ್ಮ ಕೆರೆಗಳಲ್ಲಿ ಮರಳು ಫಿಲ್ಟರ್ಗಾಗಿ ಅಗೆಯಲಾಗಿರುವ ಗುಂಡಿಗಳಲ್ಲಿ ನೀರು ಭರ್ತಿಯಾಗಿದೆ. ಮಳೆ ಇದೇ ರೀತಿ ಇನ್ನೆರಡು ದಿನ ಮುಂದುವರೆದಲ್ಲಿ ಅಂತರ್ಜಲ ಸಮಸ್ಯೆ ಕೊಂಚ ಮಟ್ಟಿಗೆ ನಿವಾರಣೆ ಆಗಬಹುದೆಂಬ ವಿಶ್ವಾಸವನ್ನು ರೈತರು ಮತ್ತು ಅಧಿಕಾರಿ ವರ್ಗ ವ್ಯಕ್ತಪಡಿಸಿದ್ದಾರೆ.