ಹಲವು ಪ್ರಕರಣಗಳಲ್ಲಿ ಅಧಿಕಾರಿಗಳ ಲೋಪ
ಕೋಲಾರ: ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಮತ್ತು ಗ್ರಾಪಂಗಳಲ್ಲಿ ಅಧಿಕಾರ ದುರುಪಯೋಗವಾಗಿರುವುದು ಕಂಡು ಬಂದಿದೆ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್. ಬಿ.ಅಡಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡು ವಿವಿಧ ಇಲಾಖೆಗಳಿಗೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಕುಂದು ಕೊರತೆಗೆ ಸಂಬಂಧಿಸಿದಂತೆ ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ತೊಬಂತ್ತಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ, ಇನ್ನಷ್ಟು ಪ್ರಕರಣಗಳ ವಿಚಾರಣೆ ನಡೆಸಬೇಕಾಗಿದೆ ಎಂದರು.
ಕ್ರಮಬದ್ಧವಾಗಿ ದಾಖಲಿಸುತ್ತಿಲ್ಲ: ಹಲವಾರು ಪ್ರಕರಣಗಳಲ್ಲಿ ಅಧಿಕಾರ ದುರುಪಯೋಗ ಮತ್ತು ದಾಖಲೆಗಳನ್ನು ತಿದ್ದಿರುವುದು ಕಂಡು ಬಂದಿದೆ. ಕಂದಾಯ ಇಲಾಖೆ, ಗ್ರಾಪಂಗಳಲ್ಲಿ ಹೆಚ್ಚಾಗಿ ಲೋಪಗಳು ಕಂಡುಬಂದಿದೆ. ಅರಣ್ಯ ಇಲಾಖೆಯಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಪವಾಗಿದೆ, ಇನ್ನು ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕರ ದೂರುಗಳನ್ನು ಕ್ರಮಬದ್ಧವಾಗಿ ದಾಖಲಿಸುತ್ತಿಲ್ಲ ಹಾಗೂ ಪ್ರಕರಣಗಳ ವಿಲೇವಾರಿಗೆ ವಿಳಂಬ ಮಾಡಲಾಗುತ್ತಿದೆ ಎಂದು ದೂರುಗಳು ಕೇಳಿ ಬಂದಿತು.
ವರದಿ ಸಲ್ಲಿಸಲು ಸೂಚನೆ: ಕಂದಾಯ ಇಲಾಖೆಯಲ್ಲಿ ಖಾತೆ ಬದಲಾವಣೆ, ಹದ್ದುಬಸ್ತು, ದುರಸ್ತಿ ಮಾಡುವುದರಲ್ಲಿ ಸಹಾ ಲೋಪದೋಷಗಳು ಕಂಡು ಬಂದಿವೆ. ಈ ಕುರಿತು ಜಿಲ್ಲಾಧಿಕಾರಿಗಳಿಂದ ಮತ್ತು ಲೋಕಾಯುಕ್ತ ಎಸ್ಪಿಯವರಿಂದ ತನಿಖೆ ಮಾಡಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಒತ್ತುವರಿ: ಕೆರೆಗಳು, ಗ್ರಾಮ ಠಾಣೆ ಹಾಗೂ ಇತರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಇದರನ್ನು ಕೂಡಲೇ ತೆರವು ಮಾಡಲು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಕೆಲವು ಕಡೆ ಸರ್ಕಾರವೇ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದೆ ಎಂದು ಪತ್ರಕರ್ತರು ಗಮನ ಸೆಳೆದಾಗ. ಅಂತಹ ಪ್ರಕರಣಗಳ ಬಗ್ಗೆಯೂ ವಿಚಾರಣೆ ನಡೆಸಿ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದೆಂದು ತಿಳಿಸಿದರು. ಅಂಗನವಾಡಿ ಕೇಂದ್ರಗಳು ಮತ್ತು ಬಿಸಿ ಊಟ ಕೇಂದ್ರಗಳಲ್ಲಿ ದುರುಪಯೋಗ ಕಂಡು ಬಂದಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೆ ಇಲ್ಲದೆ ಇದ್ದರೂ ಎಲ್ಲಾ ಮಕ್ಕಳಿಗೂ ವೆಚ್ಚ ತೋರಿಸಲಾಗಿದೆ ಇದನ್ನು ಗಮನಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾಲುಬಾಯಿ ಜ್ವರದಿಂದ ಸತ್ತಿರುವ ಹಸುಗಳಿಗೆ ಧನಸಹಾಯಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಔಷಧಿಗಳ ಖರೀದಿಗಾಗಿ 25 ಲಕ್ಷ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದಾರೆಂದು ಹೇಳಿದರು.
ಇದಕ್ಕೂ ಮುನ್ನ ಅವರು ರಂಗಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ವಿವಿಧ ಇಲಾಖೆಗಳ ದೂರುಗಳ ಬಗ್ಗೆ ವಿಚಾರಣೆ ನಡೆಸಿದರು. ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿ.ಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಲೋಕಾಯುಕ್ತ ಉಪ ನಿಬಂಧಕ ನ್ಯಾ. ನೇಗಿನಹಾಳ, ಆಧೀಕ್ಷಕ ಕೃಷ್ಣಪ್ಪ, ಡಿವೈಎಸ್ಪಿ ನಾಗರಾಜ್ ಇದ್ದರು.