ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹೈಟೆಕ್ ಕಾಲೋನಿ ನಿರ್ಮಾಣಕ್ಕೆ ಜಿಲ್ಲಾಡಳಿತ ಸ್ಕೆಚ್

Rashmi Kasaragodu
Updated On : 10 Oct 2013, 12:40 pm

ಎನ್. ವೆಂಕಟೇಶ್
ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಅ. 9
ಜಿಲ್ಲಾ ಕೇಂದ್ರದಲ್ಲಿರುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಭಿವೃದ್ಧಿ ಕಾರ್ಯ ಭರದಿಂದ ನಡೆಯುತ್ತಿದೆ. ಈ ನಡುವೆ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ನಗರದ ಚಾಮರಾಜಪೇಟೆಯ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ತಮ್ಮನ್ನು ಒಕ್ಕಲೆಬ್ಬಿಸುವ ಆತಂಕದಲ್ಲಿದ್ದು ಇವರಿಗಾಗಿ ಬೇರೆಡೆ ಜಿಲ್ಲಾಡಳಿತ ಹೈಟೆಕ್ ಅಂಬೇಡ್ಕರ್ ಕಾಲೋನಿ ನಿರ್ಮಿಸಲು ಮುಂದಾಗಿದೆ.
ಈಗಾಗಲೇ ಹಾಲಿ ಅಂಬೇಡ್ಕರ್ ಕಾಲೋನಿಗೆ ಹತ್ತಿರವಿರುವ ನಗರದ ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯಲ್ಲಿ 13 ಎಕರೆ ಭೂಮಿಯನ್ನು ಗುರುತಿಸಿದ್ದು ಮನೆಯನ್ನು ಕಳೆದುಕೊಳ್ಳುವ ಕಾಲೋನಿಯ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿಕೊಡಲು ಸುಮಾರು ರು. 22 ಕೋಟಿ ವೆಚ್ಚದ ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿದೆ. ಇದಕ್ಕೆ ಅನುಗುಣವಾಗಿ ಮೇಲ್ಮಟ್ಟದಲ್ಲೂ ಸಕಾರತ್ಮಾಕ ಸ್ಪಂದನೆ ಸಿಕ್ಕಿರುವುದರಿಂದ ಇದರ ಬೆಳವಣಿಗೆಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ನಿವಾಸಿಗಳಿಗೆ ಅನುಕೂಲ ಮಾಡಿಕೊಡುವ ಈ ಕೆಲಸದ ಸಲುವಾಗಿ ಜಿಲ್ಲಾಡಳಿತ ಸದ್ದಿಲ್ಲದೇ ಶ್ರಮಿಸುತ್ತಿದೆ.
ಮೈಸೂರು ಅರಸರ ಆಡಳಿತದ ಕಾಲದಲ್ಲಿಯೇ ಚಿಕ್ಕಬಳ್ಳಾಪುರದಲ್ಲಿ (ಮೀಟರ್ ಗೇಜ್) ರೈಲ್ವೆ ನಿಲ್ದಾಣ ನಿರ್ಮಾಣವಾಗಿದ್ದು ಪ್ರಾರಂಭದಲ್ಲಿ ರೈಲಿನ ಸಂಚಾರ ಕಡಿಮೆ ಇತ್ತು. ಕಾಲ ಕಳೆದಂತೆ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಅಂಬೇಡ್ಕರ್ ಕಾಲೋನಿಯೂ ತಲೆ ಎತ್ತಿದ್ದು ಕಳೆದ ಅನೇಕ ದಶಕಗಳಿಂದ ದಲಿತರು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಮೂಲ ಸೌಕರ್ಯಗಳ ಜತೆಗೆ ಬೀದಿದೀಪ, ಗ್ರಂಥಾಲಯ, ಶಾಲೆಯ ಸೌಲಭ್ಯವನ್ನು ಒದಗಿಸಿದ, ಕೆಲವರಿಗೆ ಮನೆಯನ್ನು ಕಟ್ಟಿಸಿಕೊಟ್ಟ (ಇವುಗಳಲ್ಲೂ ಅಸಮರ್ಪಕತೆ)ಸರ್ಕಾರಕ್ಕೆ ಇಲ್ಲಿನ ನಿವಾಸಿಗಳು ಕಾಲ ಕಾಲಕ್ಕೆ ಕಂದಾಯವನ್ನು ಕಟ್ಟಿಕೊಂಡು ಬಂದಿದ್ದು ಇದೀಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಯಿಂದ ಇವರನ್ನು ಒಕ್ಕಲೆಬ್ಬಿಸಲಾಗುತ್ತಿದೆ.
ನಿವಾಸಿಗಳ ಆತಂಕ: ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳು ಕಳೆದ ಅನೇಕ ದಶಕಗಳಿಂದಲೂ ವಾಸ ಮಾಡುತ್ತಿವೆ. ಪ್ರಾರಂಭದಲ್ಲಿ ತೀರಾ ನಿಕೃಷ್ಟ ಸ್ಥಿತಿಯಲ್ಲಿದ್ದ ಈ ಕಾಲೋನಿಯು ಅಭಿವೃದ್ಧಿಯನ್ನು (ಇದು ಅಲ್ಪ ಪ್ರಮಾಣವೇ) ಕಾಣುತ್ತಿದ್ದು ನಗರದ ಹೃದಯ ಭಾಗ ಎನಿಸಿಕೊಳ್ಳುತ್ತಿರುವುದರ ನಡುವೆ ಅಂಬೇಡ್ಕರ್ ಕಾಲೋನಿಯ ಜಾಗವೆಲ್ಲಾ ರೈಲ್ವೆ ಇಲಾಖೆಗೆ ಸೇರಿದ ಹಿನ್ನೆಲೆಯಲ್ಲಿ ಹೈಟೆಕ್ ರೈಲ್ವೆ ನಿಲ್ದಾಣ ಕಾಮಗಾರಿ ಕಾಲೋನಿಯನ್ನು ನುಂಗಿ ಹಾಕುತ್ತಿದೆ. ಈಗಾಗಲೇ ಕಾಲೋನಿಯ ನಿವಾಸಿಗಳಿಗೆ ಅನೇಕ ಬಾರಿ ಮನೆಗಳನ್ನು ತೆರವುಗೊಳಿಸಲೆ ನೋಟಿಸ್ ನೀಡಲಾಗಿದೆ. ಇದರಿಂದ ಆತಂಕಗೊಂಡ ಕಾಲೋನಿಯ ನಿವಾಸಿಗಳು ನಾನಾ ರೀತಿಯ ಹೋರಾಟಗಳನ್ನೂ ನಡೆಸಿದ್ದರ ಪ್ರತಿಫಲವಾಗಿ ಸಕಾರತ್ಮಾಕ ಭರವಸೆಗಳು ಸಿಕ್ಕಿದರೂ ಈಗಲೂ ಏಕಾಏಕಿ ಮನೆಗಳನ್ನು ತೆರವುಗೊಳಿಸಿ ನಮ್ಮನ್ನು ಎಲ್ಲಿ ಬೀದಿಪಾಲು ಮಾಡುತ್ತಾರೋ ಎಂಬ ಆತಂಕದಲ್ಲಿದ್ದಾರೆ.
ಚುರುಕಾಗಿರುವ ಕೆಲಸ: ಆತಂಕದಲ್ಲಿರುವ ಕಾಲೋನಿಯ ನಿವಾಸಿಗಳ ಜನರ ಅಭಿಪ್ರಾಯವನ್ನು ಈಗಾಗಲೇ ಪಡೆದುಕೊಂಡು ಸ್ಪಷ್ಟ ನಿರ್ಧಾರಕ್ಕೆ ಬಂದಿರುವ ಜಿಲ್ಲಾಡಳಿತ ಕಾಲೋನಿಯಲ್ಲಿ ನಿಜವಾಗಲೂ ಅನೇಕ ವರ್ಷಗಳಿಂದ ವಾಸ ಮಾಡುತ್ತಿರುವ ಕುಟುಂಬಗಳ ಸಂಖ್ಯೆ, ಇದಕ್ಕೆ ಅನುಗುಣವಾಗಿ ಬೇರೆಡೆ ಎಷ್ಟು ಮನೆಗಳನ್ನು ಕಟ್ಟಿಸಿ ಕೊಡಬೇಕಾಗುತ್ತದೆ. ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಸೇರಿದಂತೆ ನಿವಾಸಿಗಳ ಅನುಕೂಲಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಯನ್ನು ಗೌಪ್ಯ ಸರ್ವೆ ಮೂಲಕ ಕ್ರೋಢೀಕರಿಸಿದೆ. ಪ್ರಸ್ತುತ ಇರುವ ಅಂಬೇಡ್ಕರ್ ಕಾಲೋನಿಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಮನೆಗಳು ವ್ಯವಸ್ಥಿತವಾಗಿ ನಿರ್ಮಾಣವಾಗಿಲ್ಲ. ಅಲ್ಲದೇ ಇದೊಂದು ಕೊಳಚೆ ಪ್ರದೇಶ ಎಂಬ ಅಪಕೀರ್ತಿಯನ್ನು ಪಡೆದುಕೊಂಡಿದೆ. ಇದನ್ನು ತೊಲಗಿಸುವಂತೆ ಹೊಸದಾಗಿ ಹೈಟೆಕ್ ಅಂಬೇಡ್ಕರ್ ಕಾಲೋನಿಯನ್ನು ನಿರ್ಮಾಣ ಮಾಡಲು ಯೋಜನೆಯನ್ನು ಹೊಂದಲಾಗಿದೆ.
ಗೊಂದಲಕ್ಕೆ ಅವಕಾಶ ನೀಡದಿರಲು ಗೌಪ್ಯತೆ: ಅಂಬೇಡ್ಕರ್ ಕಾಲೋನಿಯ ನಿವಾಸಿಗಳನ್ನು ಒಕ್ಕಲೆಬ್ಬಿಸುವ ವಿವಾದ ಇಷ್ಟೊತ್ತಿಗಾಗಲೇ ಮುಗಿಯಬೇಕಾಗಿತ್ತು. ಇನ್ನೂ ತ್ವರಿತಗತಿಯಲ್ಲಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿತ್ತು. ಜತೆಗೆ ಕಾಲೋನಿಯ ನಿವಾಸಿಗಳ ಸಮಸ್ಯೆ ದೂರವಾಗಬೇಕಾಗಿತ್ತು. ಆದರೆ, ಈ ವಿವಾದದಲ್ಲಿ ದಲಿತಪರ ಸಂಘಟನೆಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವೇ ವಿಳಂಬಕ್ಕೆ ಕಾರಣವಾಗಿದೆ. ಗಂಡ ಹೆಂಡಿರ ಜಗಳದ ನಡುವೆ ಕೂಸು ಬಡವಾಯಿತು ಎನ್ನುವಂತೆ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಅಭಿವೃದ್ಧಿ ಕೆಲಸದ ಪ್ರತಿ ವಿಷಯದಲ್ಲೂ ವಾದ ಪ್ರತಿವಾದಗಳು ಕೇಳಿ ಬರುತ್ತ, ಪ್ರಗತಿಪರ ಕೆಲಸಗಳನ್ನು ಕೈಗೊಳ್ಳುವಲ್ಲಿ ಹಿನ್ನಡೆಯಾಗುವುದು ಸಾಮಾನ್ಯವಾಗಿದೆ. ಇದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಿಮಿಸಿದೆ. ಜಿಲ್ಲಾಡಳಿತ ಭವನ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣ ನಿರ್ಮಾಣ.... ಹೀಗೆ ಎಲ್ಲಾದರಲ್ಲೂ ಒಂದಲ್ಲಾ ಒಂದು ಭಿನ್ನ ರಾಗ ಕೇಳಿ ಬಂದಿದ್ದು ಅಂಬೇಡ್ಕರ್ ಕಾಲೋನಿಯ ವಿಷಯದಲ್ಲೂ ಹೆಚ್ಚಿಗೆ ಗೊಂದಲ ಸೃಷ್ಟಿಯಾಗದಿರಲು ಜಿಲ್ಲಾಡಳಿತ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಪರಸ್ಪರ ಮಾತುಕತೆಗೆ ಹೆಚ್ಚು ಒತ್ತು ಕೊಡದೇ ಭಿನ್ನಾಭಿಪ್ರಾಯದ ವಾತಾವರಣ ಎಲ್ಲಿ ನಿರ್ಮಾಣ ಮಾಡಿ ನಿವಾಸಿಗಳನ್ನು, ಇತ್ತ ಜಿಲ್ಲಾಡಳಿತವನ್ನು ಪೇಚಿಗೆ ಸಿಲುಕಿಸುತ್ತಾರೋ ಎಂಬ ಭಯದ ಮನೋಭಾವನೆ ಅಧಿಕಾರಿಗಳಲ್ಲಿರುವುದು ಇದಕ್ಕೆ ಕಾರಣವಾಗಿದೆ.


ಅಂಬೇಡ್ಕರ್ ಕಾಲೋನಿಯ ನಿವಾಸಿಗಳಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು 13 ಎಕರೆ ಜಾಗವನ್ನು ಗುರುತಿಸಲಾಗಿದೆ. ರು. 22 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
-ವಿಶಾಲ್. ಆರ್, ಜಿಲ್ಲಾಧಿಕಾರಿ
ಹೊಸ ಅಂಬೇಡ್ಕರ್ ಕಾಲೋನಿ ಮಾದರಿ ಬಡಾವಣೆಯಾಗಿ ನಿರ್ಮಾಣವಾಗಲಿದೆ. ಹಾಲಿ ಅಂಬೇಡ್ಕರ್ ಕಾಲೋನಿಯಲ್ಲಿ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳು ಹೊಸ ಕಾಲೋನಿಯಲ್ಲಿ ಕಾಡದಂತೆ ನೋಡಿಕೊಳ್ಳಲಾಗುವುದು.
- ಕೆ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement