ಆರೋಗ್ಯವೇ ಭಾಗ್ಯ: ಡಾ. ಅನುರಾಧ
ಮಾಲೂರು: ದೇಹದ ಆರೋಗ್ಯ ಸದೃಢವಾಗಿದ್ದರೆ ಭವಿಷ್ಯದ ಗುರಿ ಸಾಧಿಸಲು ಸಾಧ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನುರಾಧ ಹೇಳಿದರು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ತಾಲೂಕಿನ ಅರಳೇರಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಆರೋಗ್ಯದ ಕಡೆ ಗಮನ ನೀಡಬೇಕು. ಆರೋಗ್ಯ ಭಾಗ್ಯದ ಮುಂದೆ ಇತರೆ ಸಂಪತ್ತು ನಗಣ್ಯ ಎಂದರು. ಇದೇ ಸಂಧರ್ಭದಲ್ಲಿ ಶಿಬಿರಾರ್ಥಿಗಳಿಗಾಗಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದ ಡಾ. ಕುಮಾರ್ ಆರೋಗ್ಯ ಕಾಪಾಡುಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು. ಉಪನ್ಯಾಸಕ ಎ.ವಿ. ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಡಾ. ದಿವ್ಯ, ಡಾ. ಶ್ರುತಿ ಇದ್ದರು. ಶಿಬಿರದಲ್ಲಿ 200 ಮಂದಿಗೆ ಉಚಿತವಾಗಿ ತಪಾಸಣೆ ನಡೆಸಲಾಯಿತು.
ಬಾಲಕಿಯರ ಪದವಿ ಪೂರ್ವ ಕಾಲೇಜು: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ಹಮ್ಮಿಕೊಂಡರುವ ಶಿಬಿರದ ನಾಲ್ಕನೇ ದಿನ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಬಿ.ಡಿ. ವೆಂಕಟಗಿರಿ, ಆರ್. ವೆಂಕಟೇಶ್, ಕೆ. ರವೀಂದ್ರ, ಎನ್.ಎಲ್. ಶಂಕರಪ್ಪ, ಸನತ್ ಕುಮಾರ್ ಹಾಗೂ 50 ಶಿಬಿರಾರ್ಥಿ ವಿದ್ಯಾರ್ಥಿಗಳು ಭಾಗವಹಿಸಿ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.