ಒಂದೂವರೆ ತಿಂಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಪಡಿತರ ಚೀಟಿ
ಚಿಕ್ಕಬಳ್ಳಾಪುರ: ಮುಂದಿನ ಒಂದೂವರೆ ತಿಂಗಳ ಒಳಗೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಕೆ. ಸುಧಾಕರ್ ತಿಳಿಸಿದರು.
ತಾಲೂಕಿನ ನಂದಿ ಹೋಬಳಿಯ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಗುರುವಾರ ಮಾತನಾಡಿದರು.
ಬಡ ಹಾಗೂ ಅಶಕ್ತ ನಾಗರಿಕರ ಸಹಕಾರಕ್ಕೆ ಸರ್ಕಾರ ಬದ್ಧವಾಗಿದೆ.ಇದಕ್ಕೆ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆ ಜಾರಿಗೆ ತಂದಿದೆ.ಅದರ ಸಂಪೂರ್ಣ ಲಾಭ ಪಡೆಯಲು ಬಿಪಿಎಲ್ ಪಡಿತರ ಚೀಟಿ ಅತ್ಯವಶ್ಯ.ಅದನ್ನು ಪೂರೈಸಲು ತ್ವರಿತ ಗತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಆದಷ್ಟು ಬೇಗ ಜನರ ಈ ಕೊರತೆ ಬಗೆಹರಿಯಲಿದೆ ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಶೇ. 80ರಷ್ಟು ನಾಗರಿಕರು ರೈತರು.ಈ ವರ್ಷ ಸಮಾಧಾನಕರ ಮಳೆ ಆಗಿದೆ. ರೈತರು ಕೊಂಚ ಖುಷಿ ಪಟ್ಟಿದ್ದಾರೆ. ಆದರೆ ಶಾಶ್ವತ ನೀರಾವರಿ ಯೋಜನೆ ಮಾತ್ರ ನಮ್ಮ ಸಮಸ್ಯೆಗೆ ಪರಿಹಾರ. ಇದಕ್ಕಾಗಿ ನಾವು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಹಣವನ್ನೂ ನೀಡಿದೆ. ಈ ಮೂಲಕ ನಮ್ಮ ಹೋರಾಟಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಹಕಾರ ಸಿಕ್ಕಿದೆ.ಯಾವುದೇ ಯೋಜನೆ ಮೂಲಕ ಇರಲಿ, ನಮ್ಮ ತಾಲೂಕಿಗೆ ನೀರು ಬರುವುದು ಮುಖ್ಯ ಎಂದರು.
ಹಿರಿಯ ಮುಖಂಡ ಲಕ್ಷ್ಮೀನರಸಿಂಹಪ್ಪ, ಜಿ.ಪಂ. ಮಾಜಿ ಸದಸ್ಯ ಪಿ.ಎನ್. ಕೇಶವರೆಡ್ಡಿ, ಗ್ರಾ.ಪಂ. ಸದಸ್ಯರಾದ ವೇಣುಗೋಪಾಲ್, ನಾರಾಯಣಸ್ವಾಮಿ, ಬಿ.ಕೆ. ದಿನೇಶ್, ಎಂ.ಸಿ. ಶ್ರೀನಿವಾಸಲು, ಮಾಜಿ ಅಧ್ಯಕ್ಷ ಕೆ.ಎನ್. ಜಯರಾಮ್, ಮುಖಂಡರಾದ ಸಜ್ಜಿ ಕಂಟಿರಾಯಪ್ಪ, ಮುನಿವೆಂಕಟಪ್ಪ, ಚನ್ನಕೃಷ್ಣರೆಡ್ಡಿ, ನಂಜುಂಡಪ್ಪ, ವೇಣುಗೋಪಾಲ್, ಶ್ರೀನಿವಾಸ್, ಉದ್ಯಮಿ ಪ್ರಸಾದ್ ಉಪಸ್ಥಿತರಿದ್ದರು.