ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಟ್ಟಡ ಪೂರ್ಣಗೊಳಿಸದೆ ಹಣ ಖರ್ಚು

Rashmi Kasaragodu
Updated On : 11 Oct 2013, 12:21 pm

ಕೋಲಾರ: ತಾಲೂಕಿನ ಜನಪ್ಪನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 5.20 ಲಕ್ಷ ರು. ಬಿಡುಗಡೆ ಮಾಡಿದ್ದು ಕಟ್ಟಡ ಕಾಮಗಾರಿ ಅಪೂರ್ಣವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿದೆ ಎಂದು ಸುಳ್ಳು ಮಾಹಿತಿ ನೀಡಿ ಹಣ ಖರ್ಚು ತೋರಿಸಲಾಗಿದೆ ಎಂದು ತಾ.ಪಂ. ಸದಸ್ಯೆ ಲಕ್ಷ್ಮಮ್ಮ ಆರೋಪಿಸಿದರು.
ಗುರುವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಕಟ್ಟಡಗಳ ವಿಚಾರ ಪ್ರಸ್ತಾಪಿಸಿದ ಸದಸ್ಯೆ ಲಕ್ಷ್ಮಮ್ಮನವರು, ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಭೆಗೆ ತಿಳಿಸಿದ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಡಾ. ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆ ಆಗಿರುವ ಹಣವನ್ನು ಕಾಮಗಾರಿ ಮುಗಿಯದೆಯೇ ಖರ್ಚು ತೋರಿಸಿರುವುದರ ಬಗ್ಗೆ ತನಿಖೆ ನಡೆಸುವಂತೆ ಸದಸ್ಯೆ ಒತ್ತಾಯಿಸಿದಾಗ, ಸಭೆಯಲ್ಲಿದ್ದ ಉಳಿದ ಸದಸ್ಯರು ಸಹಮತ ವ್ಯಕ್ತಪಡಿಸಿದ್ದರಿಂದ ತಾ.ಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ ಅವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪ್ರಭಾರ ಇಒ ಚನ್ನಬಸವಣ್ಣನವರಿಗೆ ಸೂಚಿಸಿದರು.
ತಾಲೂಕಿನ 19 ಹಳ್ಳಿಗಳಲ್ಲಿ ಅಂಗನವಾಡಿ ಕಟ್ಟಡಗಳು ಇಲ್ಲ, ಹೊಸದಾಗಿ 13 ಕಟ್ಟಡಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧವಾಗಿ ಕಾಮಗಾರಿಯೂ ಆರಂಭಗೊಂಡಿದೆ. ಉಳಿದ 6 ಕಡೆ ನಿವೇಶನವಿಲ್ಲದೆ ಸಮಸ್ಯೆ ಉಂಟಾಗಿರುವುದರಿಂದ ನಿವೇಷನ ಮಂಜೂರು ಮಾಡಿಸುವಂತೆ ಸಿಡಿಪಿಓ ಡಾ. ಕಿರಣ್ ಅಧ್ಯಕ್ಷರನ್ನು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಬಾರ ಇಓ ಚನ್ನಬಸವಣ್ಣನವರು ಹಳ್ಳಿಗಳ ವಿವರ ನೀಡಿದಲ್ಲಿ ನಿವೇಶನ ಹುಡುಕುವುದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ತಾಲೂಕಿನ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಸರ್ಕಾರದಿಂದ 1.20 ಲಕ್ಷ ರು.ಬಿಡುಗಡೆ ಆಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲತಾ ತಿಳಿಸಿದಾಗ, ಸದಸ್ಯರು, ಸಾಮಗ್ರಿಗಳನ್ನು ಇ-ಟೆಂಡರ್ ಕರೆದು ಖರೀದಿ ಮಾಡುವಂತೆ ಸಲಹೆ ನೀಡಿದರು.
ಸಾಮಾನ್ಯ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಯಥಾಪ್ರಕಾರ ಸಾಂಕೇತಿಕ ಕೋಪ ವ್ಯಕ್ತವಾಯಿತು. ಕೋಲಾರ ಬಿಇಒ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು.
ಕೃಷಿ ಇಲಾಖೆಯ ಅಧಿಕಾರಿ ಗಾಯತ್ರಿ ಅವರು ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆ ಪರಿಸ್ಥಿತಿ ಕುರಿತು ವಿವರ ನೀಡದೆ ನಿರಾಶೆ ಮೂಡಿಸಿದರು. ಬಂಗಾರಪೇಟೆಗೆ ವರ್ಗಾವಣೆಗೊಂಡಿರುವ ಇಓ ಕೆ.ಎಸ್. ಭಟ್ ಅವರನ್ನು ಪ್ರಕರಣವೊಂದರ ತನಿಖೆ ಮುಗಿಯುವವರೆಗೆ ಹಾಗೂ ಕೆಲಸ ಮುಗಿಯುವತನಕ ಬಿಡುಗಡೆ ಮಾಡದಂತೆ ಉಪ ಲೋಕಾಯುಕ್ತರು ಆದೇಶ ನೀಡಿರುವುದರಿಂದ ಬೀಳ್ಕೊಡುಗೆ ಸಮಾರಂಭ ಮುಂದೂಡಲಾಯಿತು. ಸಭೆಯಲ್ಲಿ ಮಹಿಳಾ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಪ್ರಮುಖ ವಿಚಾರಗಳ ಮಂಡನೆ ಮತ್ತು ನಿರ್ಣಯ ಇಲ್ಲದೆ ನೀರಸವಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement