ಪಠ್ಯೇತರದಲ್ಲೂ ಭಾಗವಹಿಸಿ
ಬಂಗಾರಪೇಟೆ: ಶಾಲೆಗಳಲ್ಲಿ ಮಕ್ಕಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಪ್ರಾಂಶುಪಾಲ ಕೆ.ವಿ. ಮುನಿವೆಂಕಟಪ್ಪ ಹೇಳಿದರು. ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಪಟ್ಟಣದ ಮಕ್ಕಳು ಗ್ರಾಮೀಣ ಕಲೆ ಸಂಸ್ಕೃತಿಯನ್ನು ಅರಿವು ಮೂಡಿಸಲು ಇಂತಹ ಶಿಬಿರಗಳನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲೇ ನಡೆಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಹೇಮಾರೆಡ್ಡಿ ಮಾತನಾಡಿ, ಹೆಣ್ಣು ಮಕ್ಕಳು ಬಾಲ್ಯದಿಂದಲೇ ಶ್ರಮಿಸಬೇಕು ಅದು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಿ.ಇ. ವೆಂಕಟರಾಜು, ಕೃಷ್ಣಮೂರ್ತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಮ್ಮ, ಶಿಕ್ಷಕಿ ಅನಿತಾಬಾಯಿ, ರಾಷ್ಟ್ರೀಯ ಸೇವಾ ಶಿಭಿರದ ಅಧಿಕಾರಿ ಪರಶುರಾಮ್ ಎನ್. ಉಂಕಿ ಇದ್ದರು.
ಭೂ ಕಬಳಿಕೆ ವಿರೋಧಿಸಿ ಜಾಥಾ
ಮಾಲೂರು: ತಾಲೂಕಿನ ರಾಂಪುರದಲ್ಲಿ ಫಾರಂಫಾರೆಸ್ಟ್ನ್ನು ಸರ್ಕಾರಿ ಅಧಿಕಾರಿಗಳ ಸಹಕಾರದಿಂದ ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿರುವುದನ್ನು ವಿರೋಧಿಸಿ ರಾಂಪುರ ಗ್ರಾಮಸ್ಥರು ಗುರುವಾರ ಗ್ರಾಮದಿಂದ ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ 40 ಕಿಮೀ ಕಾಲ್ನಡಿಗೆ ಜಾಥಾ ನಡೆಸಿದರು. ಗ್ರಾಮದಿಂದ ಕೋಲಾರಕ್ಕೆ ತೆರಳಲು ಪಟ್ಟಣಕ್ಕೆ ಆಗಮಿಸಿದ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾ.ವಿಭಾಗದ ಅಧ್ಯಕ್ಷ ಡಾ.ಆರ್.ಅಶ್ವತ್ಥನಾರಾಯಣ್, 1960 ರಲ್ಲಿ ಗ್ರಾಮದ ಯುವಕ ಸಂಘಕ್ಕೆ ಮಂಜೂರಾಗಿದ್ದ ಗ್ರಾಮದ ಸೆರ್ವೆನಂ 89 ರಲ್ಲಿನ 78 ಎಕರೆ 38 ಗುಂಟೆ ಜಮೀನು ಗೋಮಾಳ ವಾಗಿದ್ದು, ನಂತರ ಫಾರಂಪಾರೆಸ್ಟ್ ಆಗಿ ಮಾರ್ಪಟ್ಟಿತ್ತು. ಸದರಿ ಜಮೀನನಲ್ಲಿ ಗ್ರಾಮದ ಬಡ ಜನರು ಕೃಷಿ ಮಾಡುತ್ತಿದ್ದರು. ಆದರೆ ನಿವೃತ್ತ ಶಿಕ್ಷಕ ಶಿವಕುಮಾರ್ ರಂಜನ್ ಹಾಗೂ ಅರಣ್ಯ ಇಲಾಖೆಯ ನೌಕರ ಮನ್ನೋಜಿ ರಾವ್ ಮಕ್ಕಳಾದ ರಾಮಚಂದ್ರರಾವ್, ಗೋಪಾಲ್ರಾವ್, ಸಜ್ಜನ್ ರಾವ್ ಸರ್ಕಾರಿ ಕಂದಾಯ ಅಧಿಕಾರಿಗಳ ಸಹಕಾರದಿಂದ 42 ಎಕರೆ ಜಮೀನನ್ನು 1959 ರಿಂದ ತಮ್ಮ ಸ್ವಾಧೀನದಲ್ಲಿದಂತೆ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದರು. ತಾಲೂಕು ಆಡಳಿತದಿಂದ ನ್ಯಾಯ ಸಿಗದ ಕಾರಣ ಜಿಲ್ಲಾಧಿಕಾರಿಗಳ ಗಮನ ಸಳೆಯಲು ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ನ್ಯಾಯ ಒದಗಿಸುವ ಭರವಸೆ ಇದೆ ಎಂದರು. ವಿ.ಎಂ. ಮುನಿವೆಂಕಟಪ್ಪ, ನಾರಾಯಣಸ್ವಾಮಿ, ನಂಬಿಗಾನಹಳ್ಳಿ ನಾರಾಯಣಸ್ವಾಮಿ, ಸುಜಾತ ಸೇರಿದಂತೆ ರಾಂಪುರದ ಗ್ರಾಮಸ್ಥರು ಭಾಗವಹಿಸಿದ್ದರು.