ರಾಜಕಾಲುವೆಗಳ ಒತ್ತುವರಿ ಪತ್ತೆಗೆ ಸರ್ವೆ ಆರಂಭ
ಕೋಲಾರ: ನಗರದ ರಾಜ ಕಾಲುವೆಗಳ ಒತ್ತುವರಿ ಹಿನ್ನಲೆಯಲ್ಲಿ ತುರ್ತು ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಹಾನಿಗೆ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿರುವುದು ಪ್ರಮುಖ ಕಾರಣವಾಗಿದೆ ಎಂದರು.
ಮನೆಗಳಿಗೆ ನೀರು: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಶಾಂತಿ ನಗರ, ರಮಹತ್ ನಗರ ಮತ್ತು ಕುವೆಂಪು ನಗರದ ಅನೇಕ ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಅಲ್ಲಿ ವಾಸ ಮಾಡುತ್ತಿರುವ ಜನರಿಗೆ ತೊಂದರೆಯಾಗಿದೆ. ರಾಜ ಕಾಲುವೆಗಳನ್ನು ತುರ್ತಾಗಿ ಸರ್ವೆ ಮಾಡಿಸಿ ಒತ್ತುವರಿ ತೆರುವುಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪನವರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ನಗರದ ರಾಜಕಾಲುವೆಗಳು ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದರೂ ಅಧಿಕಾರಿಗಳು ನಮಗೆ ಸಂಬಂಧಪಟ್ಟಿಲ್ಲವೆಂದು ನಿರ್ಲಕ್ಷಿಸಿರುವುದರಿಂದ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲು ಅವಕಾಶವಾಗಿದೆ. ಇಲಾಖೆ ಅಧಿಕಾರಿಗಳು ನ್ಯೂಸೆನ್ಸ್ ಸೃಷ್ಟಿಸಿರುವುದಲ್ಲದೆ ಜವಾಬ್ದಾರಿಯನ್ನು ಮರೆತಿರುವುದರಿಂದ ಅಧಿಕಾರಿಗಳ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ಎಂಜನಿಯರ್ಗೆ ನೋಟಿಸ್ ಜಾರಿ: ರಾಜಕಾಲುವೆಗಳ ಒತ್ತುವರಿ ತೆರುವುಗೊಳಿಸುವ ಸಂಬಂಧ ತಕ್ಷಣ ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದೆ. ಈ ಸಂಬಂಧ 133 ಸಿಆರ್ಪಿಸಿ ನಿಯಮದಡಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪರಿಗೆ ನೋಟಿಸ್ ಜಾರಿ ಮಾಡಿದ್ದು, ರಾಜಕಾಲುವೆಗಳ ಸರ್ವೆ ಮತ್ತು ಒತ್ತುವರಿ ತೆರುವು ಕಾರ್ಯಾಚರಣೆ ಮುಗಿಯುವರೆಗೆ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಕಟ್ಟಾದೇಶ ನೀಡಲಾಗದೆ ಎಂದು ಹೇಳಿದರು.
ನಗರದ ಶಾಂತಿನಗರಕ್ಕೆ ಹೊಂದಿಕೊಂಡಿರುವ ರಾಜಕಾಲುವೆಯನ್ನು ಕೆಲವರು ಮಣ್ಣಿನಿಂದ ಮುಚ್ಚಿ ನಿವೇಶಗಳನ್ನು ರಚನೆ ಮಾಡಿದ್ದಾರೆ. ಇದನ್ನು ತೆರುವುಗೊಳಿಸುವ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಸ್ವಾಧೀನಕ್ಕೆ ಪಡೆಯುವಂತೆ ಸಣ್ಣ ನೀರಾವರಿ ಇಲಾಖೆ ಇಇಗೆ ಸೂಚಿಸಿದ್ದೇನೆಂದರು.
ನಗರಸಭೆ ವತಿಯಿಂದ ಕಾಲುವೆ ಮತ್ತು ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಸಲಾಗುತ್ತಿದೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಮಳೆ ನೀರು ಸರಾಗವಾಗಿ ಹರಿಯುವಂತೆ ಜೆಸಿಬಿಗಳ ಮೂಲಕ ಕಾಮಗಾರಿ ಆರಂಭಿಸಿರುವುದರಿಂದ ಜಲಾವೃತ ಪ್ರದೇಶದಲ್ಲಿ ಈಗ ನೀರು ಖಾಲಿಯಾಗಿದೆ ಎಂದು ವಿವರಿಸಿದರು.
ಎರಡು ಕಡೆ ಗಂಜಿ ಕೇಂದ್ರ: ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯ, ಬಟ್ಟೆ ಹಾಗೂ ಇತರ ವಸ್ತುಗಳು ನಾಶವಾಗಿರುವುದರಿಂದ ಸಂತ್ರಸ್ತರಾಗಿರುವ ಜನರಿಗೆ ಶಾಂತಿ ನಗರ ಮತ್ತು ರಹಮತ್ ನಗರದ ಎರಡು ಕಡೆ ತಾತ್ಕಾಲಿಕವಾಗಿ ಎರಡು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಗುರುವಾರ ಬೆಳಿಗ್ಗೆ ಜಲಾವೃತದಿಂದ ತೊಂದರೆಗೆ ಒಳಪಟ್ಟಿರುವ ಜನರಿಗೆ ತಿಂಡಿ ವ್ಯವಸ್ಥೆ, ಮಧ್ಯಾಹ್ನ ಊಟ ಕೊಡಲಾಗಿದೆ. ಜೊತೆಗೆ ಎರಡು ಶಾದಿ ಮಹಲ್ಗಳಲ್ಲಿ ಮತ್ತು ಎರಡು ಶಾಲೆಗಳಲ್ಲಿ ಸಂತ್ರಸ್ತರು ತಾತ್ಕಾಲಿಕವಾಗಿ ಆಶ್ರಯ ಪಡೆಯಲು ವ್ಯವಸ್ಥೆ ಮಾಡಲಾಗಿದೆ, ಜಿಲ್ಲಾಡಳಿತ ವಿವಿಧ ಇಲಾಖೆಗಳ ಹಾಗೂ ನಗರಸಭೆಯ ಸಹಕಾರದಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತ ಉಂಟಾಗಿರುವುದರಿಂದ ಇನ್ನು ಎರಡು ಮೂರು ದಿನ ಕೋಲಾರ ಸೇರಿದಂತೆ ಇತರ ಕಡೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿರುವುದರಿಂದ ಯಾವುದೇ ಅಪಾಯ ಸಂಭವಿಸದ ರೀತಿಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ನಷ್ಟ ಅಂದಾಜಿಗೆ ಕ್ರಮ: ಮಳೆಯಿಂದ ಆಗಿರುವ ನಷ್ಟದ ಮಾಹಿತಿ ಸಂಗ್ರಹಣೆಗಾಗಿ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರವಿ ತಿಳಿಸಿದರು.