ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂತ್ರಸ್ತರ ಕ್ಷೇಮ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ

Rashmi Kasaragodu
Updated On : 11 Oct 2013, 12:18 pm

ಕೋಲಾರ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಕೋಲಾರ ನಗರದ ವಿವಿಧ ಪ್ರದೇಶಗಳು ಜಲಾವೃತಗೊಂಡು ಜನ ಜೀವನ ದುಸ್ತರಗೊಂಡಿರುವ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ. ಖಾದರ್ ಕಳೆದ ರಾತ್ರಿ ನಗರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿದರು.
ಎರಡು ದಿನಗಳ ಧಾರಾಕಾರ ಮಳೆಯಿಂದ ಕೋಲಾರದ ಶಾಂತಿನಗರ, ರಹಮತ್ ನಗರ, ಕುವೆಂಪು ನಗರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿ ಜಲಾವೃತವಾಗಿದ್ದರಿಂದ ಸಚಿವರು ವಿಷಯ ತಿಳಿದು ಬುಧವಾರ ಮಧ್ಯರಾತ್ರಿ ನಗರಕ್ಕೆ ಬಂದು ಪರಿಶೀಲನೆ ನಡೆಸಿದರು. ರಹಮತ್ ನಗರ, ಶಾಂತಿ ನಗರಕ್ಕೆ ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನತೆಯ ಸಮಸ್ಯೆಗಳನ್ನು ಆಲಿಸಿದರು.
ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ: ಮಳೆಯಿಂದಾಗಿ ಹಳೆಯ ಕಟ್ಟಡಗಳ ಗೋಡೆಗಳು ಕುಸಿದು ಜನತೆಭೀತರಾಗಿದ್ದನ್ನು ಗಮನಿಸಿದ ಸಚಿವರು, ಧೈರ್ಯ ನೀಡಿದಲ್ಲದೆ, ಮಳೆ ನಿಲ್ಲುವವರೆಗೆ ತಾತ್ಕಾಲಿಕ ಪುನರ್ವತಿ ಕೇಂದ್ರಗಳಲ್ಲಿ ಉಳಿಯುವಂತೆ ಸೂಚಿಸಿದರಲ್ಲದೆ, ಗಂಜಿ ಕೇಂದ್ರಗಳಲ್ಲಿ ತಿಂಡಿ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಮಳೆಯ ನೀರು ಸರಾಗವಾಗಿ ಹರಿದು ಹೋಗದಿರುವುದಕ್ಕೆ ಕಾರಣವೇನು, ಚರಂಡಿಗಳ ಸ್ವಚ್ಛತೆ ಏಕೆ ಆಗುತ್ತಿಲ್ಲವೆಂದು ಸಚಿವರು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಇಲ್ಲಿ ಅನೇಕ ಮನೆಗಳು ಕ್ರಮಬದ್ಧವಾಗಿ ನಿರ್ಮಿಸಿಲ್ಲ, ರಾಜಕಾಲುವೆಗಳು ಒತ್ತುವರಿಯಾಗಿದೆ. ಸಮಸ್ಯೆ ಬಂದಾಗ ಮಾತ್ರ ಜನತೆ ದೂರು ನೀಡುತ್ತಾರೆ, ಜನತೆಯ ಸಹಕಾರ ಇಲ್ಲದೆ ಒತ್ತುವರಿ ತೆರುವು ಸುಲಭವಲ್ಲವೆಂದು ತಿಳಿಸಿದರು.
ಶಿಸ್ತಿನ ಕ್ರಮ: ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವರು, ರಾಜಕಾಲುವೆಗಳನ್ನು ಒತ್ತುವರಿ ಯಾರೇ ಮಾಡಿಕೊಂಡಿರಲಿ, ಅವರು ಎಷ್ಟೇ ಪ್ರಭಾವಿಗಳು ಆಗಿದ್ದರೂ ಸರಿ, ಕಾನೂನು ಕ್ರಮ ಕೈಗೊಳ್ಳಿ, ರಾಜಕಾಲುವೆ ಒತ್ತುವರಿ ಆಗಿದ್ದರೂ ಮೌನವಾಗಿರುವ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ರಾಜಕಾಲುವೆಗಳ ಸರ್ವೆ ಮಾಡಿಸಿ, ಒತ್ತುವರಿ ತೆರುವು ಮಾಡಿಸಿ, ಮಳೆ ನಿಂತ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಿ, ಬಡವರಿಗೆ ಯಾವುದೇ ತೊಂದರೆ ಆಗದಂತೆ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು. ತಕ್ಷಣ ಮಳೆ ನೀರು ಖಾಲಿ ಆಗುವಂತೆ ಉಪಾಯ ಹುಡುಕಿ, ಸಮರೋಪಾಧಿಯಲ್ಲಿ ಕಾಮಗಾರಿ ನಡೆಯಲಿ, ನಗರಸಭೆ, ಸಣ್ಣ ನೀರಾವರಿ ಇಲಾಖೆ ಜೊತೆಗೂಡಿ ಕೆಲಸ ಮಾಡಬೇಕು, ಯಾವುದೇ ಲೋಪ ಬರದಂತೆ ಎಚ್ಚರ ವಹಿಸಿ ಕೆಲಸ ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಿ, ನಾಳೆ ಬೆಳಿಗ್ಗೆಯೊಳಗೆ ಯಾವುದೇ ಸಮಸ್ಯೆ ಇರಬಾದರು ಎಂದು ನಿರ್ದೇಶನ ನೀಡಿದರು.
ನಗರಸಭೆ ಸದಸ್ಯ ಸಲ್ಲಾವುದ್ದೀನ್ ಬಾಬು, ಮಳೆಯಿಂದ ನಷ್ಟ ಹೊಂದಿರುವವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಕೆಲ ನಾಗರಿಕರು ಮೂಲ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು. ಅಕ್ರಮ ಸಕ್ರಮಕ್ಕೂ ಕೆಲವರು ಕೋರಿದರು.
ಸಮಸ್ಯೆ ಅಲಿಸಿದ ಸಚಿವರು, ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ಮೂಲ ಸೌಕರ್ಯ ಕೇಳುವುದು ತಪ್ಪು, ಕೆರೆಗಳಿಗೆ ನೀರು ಹರಿಯಲು ಇರುವ ರಾಜ ಕಾಲುವೆ ಒತ್ತುವರಿ ಆದರೆ ಹೇಗೆ, ನಗರಸಭೆ ಮತ್ತು ಸರ್ಕಾರಕ್ಕೆ ತೆರಿಗೆಯನ್ನು ನೀಡದೆ ಹಕ್ಕುಗಳನ್ನು ಕೇಳಿದರೆ ಯಾವ ನ್ಯಾಯ. ಕಾಲು ದಾರಿಯೂ ಇಲ್ಲದಂತೆ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ, ಇದನ್ನು ತಾವುಗಳೇ ತೆರುವು ಮಾಡಿ, ಉತ್ತಮ ಬಡಾವಣೆ ರಚನೆಗೆ ಅವಕಾಶ ನೀಡಿದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಳೆಯ ನೀರು ಮನೆಗಳಿಗೆ ನುಗ್ಗಿರುವುದರಿಂದ ಆಹಾರ ಧಾನ್ಯ, ಬಟ್ಟೆ, ಪಾತ್ರೆ ಪಡಗು ಹಾಳಾಗಿದೆ. ಜೀವನಕ್ಕೆ ತೊಂದರೆ ಆಗಿದೆ ಎಂದು ಹೆಂಗಸರು ತಮ್ಮ ಅಳಲು ತೋಡಿಕೊಂಡಾಗ, ನಷ್ಟದ ಅಂದಾಜು ತಿಳಿದು ಜಿಲ್ಲಾ ಆಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತದೆ, ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ್, ನಗರಸಭೆ ಸದಸ್ಯ ಪ್ರಸಾದ್ ಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement