ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಾಸ್ಟೆಲ್ಗಳಲ್ಲಿ ವಾರ್ಡನ್ ಬೆದರಿಕೆ, ಆಸ್ಪತ್ರೆಯಲ್ಲಿ ಅವ್ಯವಸ್ಥೆ...

Rashmi Kasaragodu
Updated On : 11 Oct 2013, 12:19 pm

ಚಿಕ್ಕಬಳ್ಳಾಪುರ: ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಡನ್ಗಳು ಬೆದರಿಕೆ ಹಾಕುತ್ತಿರುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಲು ಸೂಚನೆ ನೀಡುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು. ಜತೆಗೆ ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಲ್ಲಿಸಿದ ಫಲಾನುಭವಿ ರೈತರ ಅರ್ಜಿಗಳನ್ನು ವಿಲೇವಾರಿ ಮಾಡದೇ ಹಾಗೆಯೇ ಉಳಿಸಿಕೊಂಡಿರುವುದಕ್ಕೆ ಕೆಡಿಪಿ ಸಭೆಯಲ್ಲಿ ಬಿಸಿಎಂ, ಆರೋಗ್ಯ ಇಲಾಖೆ ಮತ್ತು ಕೃಷಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ನಗರದ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿಪರಿಶೀಲನಾ ಸಭೆ ಗುರುವಾರ ನಡೆಯಿತು.
ಆಸ್ಪತ್ರೆ ಎದುರು ಪ್ರತಿಭಟನೆ: ಪ್ರತಿ ಸಭೆಯಲ್ಲೂ ಸಹ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ  ಬಗ್ಗೆ ಗಮನ ಸೆಳೆದು ಪರಿಹರಿಸಲು ಸೂಚನೆ ನೀಡಲಾಗುತ್ತಿದೆಯಾದರೂ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಸುಮ್ಮನೆ ಸಭೆಗಳಲ್ಲಿ ಹೇಳಿಕೊಂಡು ಕುಳಿತರೆ ಏನೂ ಪ್ರಯೋಜನವಾಗುವುದಿಲ್ಲ. ತಾ.ಪಂ. ಸದಸ್ಯರೆಲ್ಲರೂ ಸೇರಿಕೊಂಡು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಬೇಕೆಂದು ನಿರ್ಧರಿಸಿದ್ದೇವೆ. ಆಗಲಾದರೂ ಅವ್ಯವಸ್ಥೆ ಸರಿ ಹೋಗುತ್ತದೆಯೇನೋ ಎಂದು ತಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಇತ್ಯರ್ಥಕ್ಕೆ ವಿಳಂಬ: ಕೃಷಿ ಇಲಾಖೆಯಲ್ಲಿ 2010 ರಲ್ಲಿ ರೈತರು ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡದೇ ಹಾಗೆಯೇ ಇಟ್ಟುಕೊಳ್ಳಲಾಗಿದೆ. ಹೀಗೆ ಮೂರು ವರ್ಷಗಳಿಂದಲೂ ಉಳಿಯುವ ಅರ್ಜಿಗಳ ಪ್ರಮಾಣ ಹೆಚ್ಚಾಗುತ್ತಿದೆ. ಇಲಾಖೆಯಲ್ಲಿ ಯಾವುದೇ ಕೆಲಸಗಳು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾ.ಪಂ.ಅಧ್ಯಕ್ಷ ಕೃಷ್ಣಮೂರ್ತಿ ಸೂಚನೆ ನೀಡಿದಾಗ, ಕೆಲ ತಾಂತ್ರಿಕ ದೋಷಗಳಿಂದ ಸಮಸ್ಯೆ ಉದ್ಭವಿಸಿದ್ದು ಇನ್ನೂ ಒಂದೂವರೆ ತಿಂಗಳೊಳಗೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಸಮಜಾಯಿಷಿ ನೀಡಿದರು.
ಇನ್ನೂ ಬಿಸಿಎಂ ಇಲಾಖೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಯುತ್ತಿದ್ದ ವೇಳೆ ತಾ.ಪಂ. ಮಾಜಿ ಅಧ್ಯಕ್ಷ ಓಬಳೇಶಪ್ಪ, ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ ಸೇರಿದಂತೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ನಿಮಗೆ ಇಷ್ಟ ಇದ್ದರೆ ಇರಿ, ಇಲ್ಲದಿದ್ದಲ್ಲಿ ಹಾಸ್ಟೆಲ್ ಬಿಟ್ಟು ಹೋಗಿ, ಒಂದು ವೇಳೆ ದೂರುಗಳನ್ನು ಕೊಟ್ಟರೆ ಹಾಸ್ಟೆಲ್ಗಳಿಗೆ ಸೇರಿಸಿಕೊಳ್ಳುವುದಿಲ್ಲ ಎಂದೆಲ್ಲಾ ಬೆದರಿಕೆ ಹಾಕುತ್ತಿದ್ದು ಯಾರ ವೈಯಕ್ತಿಕ ಹಣದಿಂದಲೂ ಹಾಸ್ಟೆಲ್ಗಳು ನಡೆಯುತ್ತಿಲ್ಲ. ಸರ್ಕಾರ ಹಣ ಕೊಡುತ್ತಿದೆ. ಇದಕ್ಕೆ ಅಧಿಕಾರಿಗಳು ಮಕ್ಕಳನ್ನು ಬೆದರಿಸುವಂತಹುದನ್ನು ಬಿಡಬೇಕೆಂದು ತಿಳಿಸಿದಾಗ ಧ್ವನಿಗೂಢಿಸಿದ ತಾ.ಪಂ. ಅಧ್ಯಕ್ಷರು,ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ  ಭಾರತಿ, ಮಾಜಿ ಅಧ್ಯಕ್ಷೆ ಮಂಜುಳ, ಕಾರ್ಯ ನಿರ್ವಹಣಾಧಿಕಾರಿ ಗಣಪತಿ ಸಾಕ್ರೆ, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement