ಅತಿಥಿ ಶಿಕ್ಷಕರ ಆಯ್ಕೆಯಲ್ಲೂ ಅಕ್ರಮ
ಚಿಂತಾಮಣಿ: ತಾಲೂಕಿನ ಕಂದಾಯ ಇಲಾಖೆಯಲ್ಲಿ ಮುಗಿಲು ಮುಟ್ಟಿರುವ ಭೂ ಹಗರಣ ಬಿಸಿ ಇನ್ನೂ ತಣ್ಣಗಾಗದಿರುವಾಗಲೇ ಶಿಕ್ಷಣ ಇಲಾಖೆಯ ಅತಿಥಿ ಶಿಕ್ಷಕರ ಆಯ್ಕೆಯಲ್ಲಿ ನಕಲಿ ದಾಖಲೆಗಳು ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ಮೂಡಲಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಇ. ರಘುನಾಥಪ್ಪ ನೇಮಕ ಮಾಡಿಕೊಂಡಿರುವ ಕನ್ನಡ ಅತಿಥಿ ಶಿಕ್ಷಕರ ಆಯ್ಕೆ ವಿಚಾರದಲ್ಲಿ ಇದು ಮೇಲ್ನೋಟಕ್ಕೆ ಸಾಬೀತಾಗಿದೆ. ಮೂಡಲಗೊಲ್ಲಹಳ್ಳಿ ಗ್ರಾಪಂ ಕಾರ್ಯದರ್ಶಿ ತಾನು ಸ್ಪಷ್ಟೀಕರಣವಾಗಿ ನೀಡಿರುವ ವಾಸಸ್ಥಳ ಪ್ರಮಾಣ ಪತ್ರದಲ್ಲಿ ಇದು ಬಿಂಬಿತವಾಗಿದೆ.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಅತಿಥಿ ಶಿಕ್ಷಕರ ಹುದ್ದೆ ಗಿಟ್ಟಿಸಿಕೊಳ್ಳಲು ದೇವಪ್ಪಲ್ಲಿ ಗ್ರಾಮದ ಕೆ. ಸುನಿತ ಎಂಬವರು ಗ್ರಾಪಂ ಕಾರ್ಯದರ್ಶಿಗಳಿಂದ ಸುನಿತ. ಕೆ ಬಿನ್ ಕೆ.ಎಂ. ಕೃಷ್ಣಪ್ಪ ಎಂ. ಗೊಲ್ಲಹಳ್ಳಿ ಎಂದು ವಾಸಸ್ಥಳ ದೃಡೀಕರಣ ಪತ್ರ ಪಡೆದು ಮುಖ್ಯ ಶಿಕ್ಷಕರಿಗೆ ಸಲ್ಲಿಸಿ ಆಯ್ಕೆಯಾಗಿದ್ದಾರೆ. ಇದೇ ಹುದ್ದೆಗೆ ಅರ್ಜಿ ಸಲ್ಲಿಸಿ ವಂಚಿತವಾಗಿರುವ ಎಂ. ಗೊಲ್ಲಹಳ್ಳಿ ನಿವಾಸಿ ಎ. ಅರುಣ ಸುನಿತ ಆಯ್ಕೆ ನಕಲಿ ದಾಖಲೆಗಳಿಂದ ಕೂಡಿದೆ ಎಂದು ಮುಖ್ಯ ಶಿಕ್ಷಕ, ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕ, ಜಿಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸಿದ್ದರೂ ಯಾವುದೇ ತನಿಖೆಯಾಗಿಲ್ಲ. ಶಾಲೆಯ ಮುಖ್ಯ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಮೀಲಾಗಿ ತನಿಖೆ ನಡೆಸದೆ ಕುಮ್ಮಕ್ಕು ನೀಡುತ್ತಿರುವುದು ದುರಂತವಾಗಿದೆ ಎಂದು ಅವಕಾಶ ವಂಚಿತ ಅರುಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.