ಕಾನೂನು ಅರಿವು ಕಾರ್ಯಕ್ರಮ
ಚಿಂತಾಮಣಿ: ತಾಲೂಕು ಕಾನೂನು ಸೇವಾ ಸಮಿತಿವಕೀಲರ, ಸಂಘ, ಸಮಾಜ ಕಲ್ಯಾಣ ಇಲಾಖೆ, ವಿಷ್ಣು ವೃದ್ಧಾಶ್ರಮ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಪಟ್ಟಣದ ಡೈಮಂಡ್ ಟಾಕೀಸ್ ರಸ್ತೆಯ ವಿಷ್ಣು ವೃದ್ಧಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಬಿ. ರೆಹಮಾನ್ ನೆರೆವೇರಿಸಿದರು. ಅಧ್ಯಕ್ಷತೆಯನ್ನು ವೃದ್ಧಾಶ್ರಮದ ಕಾರ್ಯದರ್ಶಿ ಕೆ. ರವಿ ವಹಿಸಿದ್ದು, ವಕೀಲರ ಸಂಘದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ, ವಕೀಲರಾದ ಎಂ.ವಿ. ವಿಜಯ್, ಎನ್.ಕೆ. ಪ್ರಸಾದ್, ಸಿ.ಎಸ್. ಅನ್ವರ್ಖಾನ್, ಮೊಹಮದ್ ಶಫಿ ಇದ್ದರು.
ಸೈಕಲ್ ಯಾತ್ರೆ
ಚಿಕ್ಕಬಳ್ಳಾಪುರ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದಲ್ಲಿ ಅ.15 ರಂದು ಉಜ್ವಲ ಭಾರತಕ್ಕಾಗಿ ಶಾಂತಿಧೂತ ಯುವ ಸೈಕಲ್ ಯಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಲಲಿತಕ್ಕ ತಿಳಿಸಿದ್ದಾರೆ.
ಉಜ್ವಲ ಭಾರತಕ್ಕಾಗಿ ಶಾಂತಿಧೂತ ಯುವ ಸೈಕಲ್ ಯಾತ್ರೆ ಅ.15 ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ. ನಗರ ಹೊರ ವಲಯದ ಕೆ.ವಿ. ಕ್ಯಾಂಪಸ್ ಬಳಿ ಯುವ ಸೈಕಲ್ ಯಾತ್ರೆಗೆ ಕೆ.ವಿ. ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಚಾಲನೆ ನೀಡಲಿದ್ದಾರೆ. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಈ ಸೈಕಲ್ ಯಾತ್ರೆ ನಡೆಯಲಿದೆ. ಇದಾದ ಬಳಿಕ ನಗರಸಭೆಯ ಜ್ಯೂಬಿಲಿ ಹಾಲ್ನಲ್ಲಿ ಸಂಜೆ 5 ಗಂಟೆಗೆ ಸಮಾರಂಭದ ಉದ್ಘಾಟನೆ ನಡೆಯಲಿದೆ. ಶಾಸಕ ಕೆ. ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಯಾತ್ರೆಯ ಗುರಿ ಮತ್ತು ಉದ್ದೇಶವನ್ನು ಕೆ.ಜಿಎಫ್. ಸೇವಾ ಕೇಂದ್ರದ ರಾಜಯೋಗ ಶಿಕ್ಷಕಿ ರಾಜಯೋಗಿನಿ ಬಿ.ಕೆ. ರತ್ನಕ್ಕ ತಿಳಿಸಿಕೊಡಲಿದ್ದಾರೆ. ಕರ್ನಾಟಕ ಹಾಗೂ ಆಂಧ್ರ ಉಪ-ವಲಯದ ರಾಜಯೋಗಿನಿ ಬ್ರಹ್ಮಕುಮಾರಿ ಪದ್ಮಾಜೀರವರು ಈಶ್ವರಿಯ ಸಂದೇಶವನ್ನು ನೀಡಲಿದ್ದಾರೆ. ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಕೋಡಿರಂಗಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಬಾಲಾಜಿಸಿಂಗ್, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿಸೊಣ್ಣೇಗೌಡ, ಶ್ರೀ ಕೆ.ವಿ. ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ. ನವೀನ್ಕಿರಣ್, ನಗರಸಭೆ ಪೌರಾಯುಕ್ತ ರುದ್ರಮುನಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಗರ ವೀಕ್ಷಣೆಗಾಗಿ ಜಿಲ್ಲಾಧಿಕಾರಿ ಭೇಟಿ
ಕೆಜಿಎಫ್: ನಗರ ವೀಕ್ಷಣೆ ಹಾಗೂ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಲು ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಶುಕ್ರವಾರ ಕೆಜಿಎಫ್ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿದರು.
ನಗರದ ಚಾಂಪಿಯನ್ರೀಫ್ನ ಡಿಎಆರ್ ಪೊಲೀಸ್ ಕಾಲೋನಿ ಸಮೀಪದ 7 ಎಕರೆ ಅರಣ್ಯ ಪ್ರದೇಶದಲ್ಲಿ ಹಲವು ವರ್ಷಗಳಿಂದ ತಾತ್ಕಾಲಿಕವಾಗಿ ನಡೆಸುಕೊಂಡು ಬರುತ್ತಿರುವ ಪೊಲೀಸ್ ಬಂದೂಕು ತರಬೇತಿ ವಲಯವನ್ನು ಪೊಲೀಸ್ ಇಲಾಖೆಗೆ ವರ್ಗಾಯಿಸಲು ಸ್ಥಳ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆಗೆ ಸೇರಿದ 7 ಎಕರೆ ಪ್ರದೇಶವನ್ನು ಪೊಲೀಸ್ ಬಂದೂಕು ತರಬೇತಿಗೆ ನೀಡುವಂತೆ ಸೂಚಿಸಿದ್ದು ಅರಣ್ಯ ಇಲಾಖೆ ಈ ಸ್ಥಳವನ್ನು ನೀಡಲು ಸಮ್ಮತಿ ಸೂಚಿಸಿತ್ತಾದರೂ ಈವರೆಗೆ ಇಲಾಖೆಯ ಸಮ್ಮುಖದಲ್ಲಿದೆ. ಆದ್ದರಿಂದ ಪೊಲೀಸ್ ಇಲಾಖೆಯ ವಶಕ್ಕೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಕಂದಾಯ ಇಲಾಖೆಯ ಅಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರಿ, ಅರಣ್ಯ ಇಲಾಖೆ, ತಹಸೀಲ್ದಾರ್, ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಪಂ ಸದಸ್ಯರ ಸಭೆಯನ್ನು ನಡೆಸಿದರು. ಅದೇ ರೀತಿ ಮಾರಿಕುಪ್ಪಂ ಗ್ರಾಪಂ ವ್ಯಾಪ್ತಿಯ ಕಲ್ಲಿಕುಪ್ಪಂ ಗ್ರಾಮದಲ್ಲಿ ಗೋಮಾಲ ಜಮೀನುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಡಿಎಆರ್ ಪೊಲೀಸ್ ವೃತ್ತ ನಿರೀಕ್ಷಕ ರಘು, ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಚಂದ್ರಶೇಖರ್ರೆಡ್ಡಿ ಹಾಜರಿದ್ದರು.