ಪಿಎಸ್ಐ ಲೋಕಾಯುಕ್ತ ಬಲೆಗೆ
ಕೆಜಿಎಫ್: ಬೇತಮಂಗಲ ಗ್ರಾಮ ಪೊಲೀಸ್ ಠಾಣಾ ಪಿಎಸ್ಐ ತಮ್ಮ ನಿವಾಸದಲ್ಲಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೂಡಲೇ ಅವರನ್ನು ಕೇಂದ್ರ ವಲಯ ಐಜಿಪಿ ಅಮರ್ಕುಮಾರ್ಪಾಂಡೆ ಅವರ ಆದೇಶದ ಮೇರಗೆ ಸೇವೆಯಿಂದ ಅಮಾನತ್ತು ಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಫಟ್ ತಿಳಿಸಿದ್ದಾರೆ.
ಬೇತಮಂಗಲ ಪಿಎಸ್ಐ ಜಗದೀಶ್ ಕಳೆದ ರಾತ್ರಿ ಸೀತಂಪಲ್ಲಿ ಗ್ರಾಮದ ನಿವಾಸಿ ಚಂದ್ರಪ್ಪ ಅವರಿಂದ 5 ಸಾವಿರ ಲಂಚ ಪಡೆಯುತ್ತಿದ್ದಾಗ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ದ್ವಿಚಕ್ರ ವಾಹನ ಕಳುವಿನ ಪ್ರಕರಣಕ್ಕೆ ಸಂಬಂಧಿಸಿ ಸೀತಂಪಲ್ಲಿ ಚಂದ್ರಪ್ಪ ಅವರನ್ನು ಆರೋಪಿಯನ್ನಾಗಿ ದೂರು ದಾಖಲಿಸಿಕೊಳ್ಳಲಾಗಿತ್ತು.
ಸದರಿ ಪ್ರಕರಣದಿಂದ ಚಂದ್ರಪ್ಪ ಅವರ ಹೆಸರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಡಲು 20 ಸಾವಿರ ನೀಡುವಂತೆ ಒತ್ತಾಯಿಸಿದ್ದು, ಅದರಂತೆ ಲೋಕಾಯುಕ್ತ ಡಿವೈಎಸ್ಪಿ ಬಿ. ರಾಮಮೂರ್ತಿ, ಅಶ್ವತ್ಥನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಕಳೆದ ರಾತ್ರಿ 10.30 ಗಂಟೆಗೆ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಪಿಎಸ್ಐ ಜಗದೀಶ್ರನ್ನು 5 ಸಾವಿರ ಲಂಚದ ಹಣದೊಂದಿಗೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಲುಕಿದ್ದು ಜಗದೀಶ್ರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.