ಬೆಂವಿವಿ ಕುಲಸಚಿವರ ಸಸ್ಪೆಂಡ್ ಮಾಡಿ ರೈತ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆ
ಕಪ್ರ ವಾರ್ತೆ ಕೋಲಾರ ಅ.11
ಬಿಎ, ಬಿ.ಕಾಂ ಮತ್ತು ಬಿಎಸ್ಸಿ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಫಲಿತಾಂಶದಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ವಿಫಲರಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರನ್ನು ಕೂಡಲೇ ಅಮಾನತ್ತುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಯಿತು.
ಪ್ರತಿ ವರ್ಷವೂ ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಲೋಪವೆಸಗುತ್ತಿರುವ ವಿವಿಯ ಪರೀಕ್ಷಾಂಗ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಕುಲಸಚಿವರು ಮೌನವಾಗಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಹೂವಳ್ಳಿ ನಾಗರಾಜ್ ಆರೋಪಿಸಿದರು. ಕೋಲಾರ ಜಿಲ್ಲೆಯ ಸಾವಿರಾರು ಪದವಿ ವಿದ್ಯಾರ್ಥಿಗಳಲ್ಲಿ ದಲಿತರು, ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪರೀಕ್ಷಾ ಫಲಿತಾಂಶದಲ್ಲಿ ಲೋಪವಾಗಿರುವುದರಿಂದ ಈ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ವಿವಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ನಿವಾರಣೆ ಆಗಿಲ್ಲವೆಂದು ದೂರಿದರು.
ಕೂಡಲೇ ಮರು ಮೌಲ್ಯ ಮಾಪನ ಮಾಡಬೇಕು, ತಪ್ಪು ಮಾಡಿರುವ ಮೌಲ್ಯ ಮಾಪಕರ ವಿರುದ್ಧ ಕ್ರಮ ಜರುಗಿಸಬೇಕು, ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ 1 ಸಾವಿರ ರು. ವಾಪಸ್ ಮಾಡಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ಪರವಾಗಿ ಕಚೇರಿ ಸಿಬ್ಬಂದಿ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ನಾರಾಯಣಗೌಡ, ಮುಖಂಡರಾದ ಪ್ರಜ್ವಲ್, ರವಿ, ಸುದರ್ಶನ್, ಸುಬ್ರಮಣಿ, ಸುನೀಲ್, ವಾಸು ಹಾಗೂ ವಿಷ್ಣು ಇದ್ದರು.