ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತ್ತೆ ಕಸದ ತೊಟ್ಟಿಯಾದ ನಾಗರಕುಂಟೆ ಕಲ್ಯಾಣಿ

Rashmi Kasaragodu
Updated On : 12 Oct 2013, 12:15 pm

ಕೋಲಾರ: ನಗರದ ಹೃದಯ ಭಾಗದಲ್ಲಿನ ಕಠಾರಿಪಾಳ್ಯದ ಪುರಾಣ ಪ್ರಸಿದ್ಧ ನಾಗರಕುಂಟೆ ಕಲ್ಯಾಣಿಯ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಮತ್ತೆ ಪವಿತ್ರ ಕಲ್ಯಾಣಿ ಕಸದ ತೊಟ್ಟಿಯಾಗಿ ಪರಿವರ್ತನೆ ಆಗುತ್ತಿದೆ.
ಅನೇಕ ವರ್ಷಗಳಿಂದ ಕಲ್ಯಾಣಿಯ ಅಭಿವೃದ್ಧಿಗೆ ಜನತೆ ಒತ್ತಾಯಿಸುತ್ತಿದ್ದ ಹಿನ್ನಲೆಯಲ್ಲಿ 2012ರ ಆಗಸ್ಟ್ ತಿಂಗಳಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಒ ಅವರುಗಳ ನಾಯಕತ್ವದಲ್ಲಿ ವಿವಿಧ ಇಲಾಖೆಗಳ ಅದಿಕಾರಿಗಳು, ಸರ್ಕಾರಿ ನೌಕರರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಕಲ್ಯಾಣಿಯ ಕಲ್ಯಾಣಕ್ಕಾಗಿ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದ್ದರು.
ನಾಗರಕುಂಟೆಯಲ್ಲಿ ತುಂಬಿದ್ದ ಕಸ ಕಡ್ಡಿ, ಹೂಳನ್ನು ಸುಮಾರು 15 ರಿಂದ 20 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಲಾರಿ-ಟ್ರ್ಯಾಕ್ಟರ್ಗಳ ಮೂಲಕ ತೆರವುಗೊಳಿಸಲಾಗಿತ್ತು.
ನಾಗರಕುಂಟೆಯನ್ನು ಸುಂದರವಾದ ಉದ್ಯಾನವನ ಮಾಡುವ ಉದ್ದೇಶದಿಂದ ಕಾಮಗಾರಿಯನ್ನು ಆರಂಭಿಸಲಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಯ ಜವಾಬ್ದಾರಿ ವಹಿಸಲಾಗಿತ್ತು.
ನಾಗರಕುಂಟೆಯ ಒಳ ಭಾಗದಲ್ಲಿ ತಡೆಗೋಡೆ ನಿರ್ಮಿಸಲು ಕಾಮಗಾರಿ ನಡೆಯುತ್ತಿದ್ದಾಗ ಇದ್ದಕ್ಕಿದಂತೆ ನಗರಸಭೆಯವರು ಕಾಮಗಾರಿ ನಿಲ್ಲಿಸಿದರು. ಸುಮಾರು ರು. 75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ, ಜೊತೆಗೆ ನಿರ್ಮಿತಿ ಕೇಂದ್ರದಿಂದಲೇ ಕಾಮಗಾರಿ ಮುಂದುರೆಸಬೇಕೇ ಬೇಡವೇ ಎಂಬುದಕ್ಕೆ ಸರ್ಕಾರದಿಂದ ಅನುಮತಿಗಾಗಿ ಬರೆದ ಪತ್ರಕ್ಕೆ ಸರ್ಕಾರದಿಂದ ಇನ್ನು ಉತ್ತರ ಸಿಗದಿರುವುದರಿಂದ ಕಾಮಗಾರಿ ನಿಂತಿದೆ.
ಇದರಿಂದಾಗಿ ನಾಗರಕುಂಟೆ ಮತ್ತೆ ಈ ಹಿಂದಿನ ರೀತಿಯಲ್ಲೇ ಕಸದ ತೊಟ್ಟಿಯಾಗಿ ಪರಿವರ್ತನೆ ಆಗುತ್ತಿದೆ, ಸುತ್ತ ಮುತ್ತಲ ಮನೆಗಳವರು, ಹೋಟೆಲ್ ಮಾಲೀಕರು ತ್ಯಾಜ್ಯಗಳನ್ನು ಕುಂಟೆಯಲ್ಲಿ ಎಸೆಯುವ ಮೂಲಕ ಜನತೆಯ ಆಶಯಕ್ಕೆ ಭಂಗ ಉಂಟು ಮಾಡುತ್ತಿದ್ದಾರೆ, ಜೊತೆಗೆ ಹಳೆ ಕಟ್ಟಡಗಳ ತ್ಯಾಜ್ಯವನ್ನು ಸಹ ಇಲ್ಲಿ ಸುರಿಯಲಾಗುತ್ತಿರುವುದರಿಂದ ಕುಂಟೆ ಸಮೀಪದ ಮನೆಗಳಿಗೆ ತೊಂದರೆ ಆಗುತ್ತಿರುವುದಲ್ಲದೆ, ದುರ್ನಾತದಿಂದ ಜನತೆ ಬಳಲುವಂತಾಗಿದೆ.
ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಕುಂಟೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಚ ಮಟ್ಟಿಗೆ ನೀರು ಶೇಖರಣೆ ಆಗಿದ್ದು ಇದು ಬಳಕೆಗೆ ಪ್ರಯೋಜನವಾಗದೆ ಸೊಳ್ಳೆಗಳ ತಾಣವಾಗಿರುವುದರಿಂದ ಜನತೆ ತತ್ತರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ನಿಂತಿರುವ ಕಾಮಗಾರಿಗೆ ಪುನರ್ ಚಾಲನೆ ನೀಡಬೇಕು, ಜನತೆಯ ಆಶಯದಂತೆ ನಾಗರಕುಂಟೆ ಸುಂದರ ತಾಣವಾಗಬೇಕು, ಇದಕ್ಕೂ ಮುಂದೆ ನಾಗರಕುಂಟೆಯ ಸುತ್ತಲು ಹಾಕಿರುವ ಕಸವನ್ನು ವಿಲೇವಾರಿ ಮಾಡಿಸಿ ಬೇಲಿ ನಿರ್ಮಿಸುವ ಮೂಲಕ ರಕ್ಷಣೆ ನೀಡಬೇಕೆಂದು ಮನ್ವಂತರ ಪ್ರಕಾಶನದ ಪ್ರಧಾನ ಸಂಚಾಲಕ ಎಸ್.ಎನ್. ಪ್ರಕಾಶ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement