ಮುಂದುವರೆದ ರಾಜ ಕಾಲುವೆಗಳ ಸ್ವಚ್ಛತೆ
ಕೋಲಾರ: ನಗರದಲ್ಲಿ ಎರಡು ದಿನಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಕೆಲ ಪ್ರದೇಶಗಳು ಜಲಾವೃತಗೊಂಡ ಹಿನ್ನಲೆಯಲ್ಲಿ ಆರಂಭಿಸಿದ ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ಬಿರುಸಿನಿಂದ ಸಾಗಿದೆ.
ಗುರುವಾರ ಜಿಲ್ಲಾಧಿಕಾರಿಗಳು ಸಣ್ಣ ನೀರಾವರಿ ಇಲಾಖೆಯ ಇಇ ಕೃಷ್ಣಪ್ಪನವರಿಗೆ ತುರ್ತು ವಾರೆಂಟ್ ಜಾರಿ ಮಾಡಿ ರಾಜಕಾಲುವೆಗಳ ಸ್ವಚ್ಛತೆ ಮತ್ತು ಒತ್ತುವರಿ ತೆರವು ಮಾಡುವ ಸಂಬಂಧ ಸರ್ವೆ ಕಾರ್ಯ ನಡೆಸುವಂತೆ 133 ಸಿಆರ್ಪಿಸಿ ಅಡಿ ಆದೇಶಿಸಿದ್ದರು.
ಇದರ ಜೊತೆಗೆ ನಗರಸಭೆಯ ಅಧಿಕಾರಿಗಳಿಗಳಿಗೂ ನಗರದ ಎಲ್ಲಾ ಚರಂಡಿಗಳ ಸ್ವಚ್ಛತೆ ಮಾಡುವಂತೆ ಸೂಚಿಸಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ರಾಜಕಾಲುವೆಗಳ ಸ್ವಚ್ಛತೆಗಾಗಿ ಜೆಸಿಬಿಗಳನ್ನು ಬಳಸಿ ಟನ್ಗಟ್ಟಲೆ ಹೂಳನ್ನು ಹೊರ ತೆಗೆಸಿ ಟ್ರ್ಯಾಕ್ಟರ್ಗಳ ಮೂಲಕ ನಗರದ ಹೊರ ವಲಯದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ.
ಶಾಂತಿ ನಗರ, ರಹಮತ್ನಗರ, ಶೇಯನ್ ಷಾ ಮೊಹಲ್ಲಾ, ಅಂತರಗಂಗೆ ರಸ್ತೆ, ಅರಹಳ್ಳಿ ಮುಂತಾದ ಕಡೆ ಹತ್ತಾರು ಜೆಸಿಬಿಗಳನ್ನು ಬಳಸಿ ಕಾಲುವೆಗಳಲ್ಲಿ ಸುಮಾರು ವರ್ಷಗಳಿಂದ ಶೇಖರಣೆಯಾಗಿದ್ದ ಹೂಳನ್ನು ಹೊರ ತೆಗದು ಸಾರ್ವಜನಿಕರಿಗೆ ತೊಂದರೆಯಾಗ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಶುಕ್ರವಾರ ಬೆಳಿಗ್ಗೆ ಕೆಲವು ಕಡೆ ಹೂಳನ್ನು ತೆಗೆದು ಕೋಡಿಕಣ್ಣೂರು ಕೆರೆಯ ಏರಿಯ ಮೇಲೆ ಸುರಿಯಲಾಗಿತ್ತು. ಇದರಿಂದ ಕುಪಿತರಾದ ಸಾರ್ವಜನಿಕರು, ವಾಹನಗಳು ಮತ್ತು ಜನತೆ ಓಡಾಡುವ ಜಾಗದಲ್ಲಿ ಗಲೀಜು ಸುರಿಯುವುದರಿಂದ ರೋಗ ರುಜಿನ ಹೆಚ್ಚಾಗುತ್ತದೆ, ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತದೆ ಎಂದು ಪ್ರತಿಭಟಿಸಿದ್ದರಿಂದ ಹೂಳನ್ನು ಕೋಡಿಕಣ್ಣೂರು ಗ್ರಾಮದಿಂದ ಹೊರಗಡೆ ವಿಲೇವಾರಿ ಮಾಡಲಾಯಿತು.
ಬುಧವಾರ ಮತ್ತು ಗುರುವಾರ ಬಿದ್ದ ಭಾರೀ ಮಳೆಯಿಂದ ಸಂತ್ರಸ್ತರಾದ ಜನರಿಗೆ ಜಿಲ್ಲಾ ಆಡಳಿತದಿಂದ ಎರಡು ಕಡೆ ತೆರೆಯಲಾಗಿರುವ ಗಂಜಿ ಕೇಂದ್ರಗಳಲ್ಲಿ ಶುಕ್ರವಾರ ಸಹ ಆಹಾರ ಒದಗಿಸಲಾಯಿತು. ಕೆಲವರು ಶಾದಿ ಮಹಲ್ನಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ, ಈ ಪೈಕಿ ಕೆಲವರು ಶನಿವಾರ ಬೆಳಿಗ್ಗೆ ಮನೆಗಳಲ್ಲಿ ನೀರು ಖಾಲಿ ಆಗಿರುವುದರಿಂದ ಮರಳಿ ಗೂಡಿಗೆ ಸೇರಿದರು.
ಕೋಲಾರ ತಹಸೀಲ್ದಾರ್ ನಾಗರಾಜ್, ನಗರಸಭೆ ಆಯುಕ್ತ ಜಗದೀಶ್ ಹಾಗೂ ಸಿಬ್ಬಂದಿ ಜಿಲ್ಲಾಧಿಕಾರಿ ಡಿ.ಕೆ. ರವಿಯವರ ಸೂಚನೆಯ ಮೇರೆಗೆ ಸ್ವಚ್ಛತಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಕೋಲಾರಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರು ಅಧಿಕಾರಿಗಳ ಜೊತೆ ಚರ್ಚಿಸಿ ಮಳೆಯಿಂದ ಹಾನಿಗೀಡದವರಿಗೆ ಸೂಕ್ತ ರೀತಿಯಲ್ಲಿ ನೆರವು ಒದಗಿಸಿ, ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರು ಯಾರೇ ಆಗಿದ್ದರೂ ಸರಿ ಮುಂದಿನ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಒತ್ತುವರಿ ತೆರವು ಮಾಡಿಸಿ ಎಂದು ಸೂಚನೆ ನೀಡಿದರು.
ಗುರುವಾರ ರಾತ್ರಿಯಿಂದ ಮಳೆ ನಿಂತಿರುವುದರಿಂದ ಜಲಾವೃತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನತೆಗೆ ಕೊಂಚ ಸಮಾಧಾನ ಉಂಟಾಗಿದೆ. ಮಳೆ ನಿಂತಿದ್ದರೂ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆ ಹೆಚ್ಚಾಗುವ ಸೂಚನೆಯಿಂದ ಮುಂಜಾಗ್ರತೆ ವಹಿಸಿದ್ದಾರೆ.