ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಲಿಂಗತ್ವ ಅಲ್ಪಸಂಖ್ಯಾತರು ಸಹಜ ಜೀವನ ನಡೆಸಲಿ

Rashmi Kasaragodu
Updated On : 12 Oct 2013, 12:12 pm

ಚಿಕ್ಕಬಳ್ಳಾಪುರ: ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಕೀಳರಿಮೆ ತೊರೆದು ಸಹಜ ಜೀವನ ನಡೆಸಬೇಕು. ಇಂತಹ ವಾತಾವರಣ ನಿರ್ಮಾಣವಾಗಲು ಜನರು ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವ ಭಾವನೆಯಿಂದ ಕಾಣಬೇಕೆಂದು ಜಿಲ್ಲಾ ಸತ್ರ ನ್ಯಾಯಾಧೀಶ ಈರಣ್ಣವರ್ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರಿಗೆ ಕರಕುಶಲ ತರಬೇತಿ ಮತ್ತು ಸಹಾಯ ಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಸಹಜವಾಗಿ ಎಲ್ಲರನ್ನೂ ಕಾಡುತ್ತವೆ. ಆದರೆ, ಸಮಸ್ಯೆಗಳನ್ನು ದೂರ ಮಾಡಲು ಪ್ರಯತ್ನಿಸಬೇಕೇ ಹೊರತು ಸಮಸ್ಯೆಗಳನ್ನು ದೊಡ್ಡದನ್ನಾಗಿ ಊಹಿಸಿಕೊಂಡು ತೊಂದರೆ ಅನುಭವಿಸಬಾರದು. ಇದನ್ನರಿತು ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಕೀಳರಿಮೆ ತೊರೆದು ಉತ್ತಮ ಜೀವನ ನಡೆಸಬೇಕು. ಈ ಮೂಲಕ ಸಮಾಜದಿಂದ ಸ್ವಯಂ ಗೌರವ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಾಮಾಣಿಕ ಪ್ರಯತ್ನ: ಪ್ರಸ್ತುತ ಲಿಂಗತ್ವ ಅಲ್ಪಸಂಖ್ಯಾತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಹಿಂದೆ ಗಂಭೀರ ಸ್ವರೂಪದಲ್ಲಿದ್ದ ಸಮಸ್ಯೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿದ್ದು ಈಗ ಸುಧಾರಣೆ ಕಂಡು ಬಂದು ಒಳ್ಳೆಯ ಬೆಳವಣಿಗೆಗಳನ್ನು ಕಾಣಲಾಗುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸಭೆಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಬ್ಬರು ಲಿಂಗ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಸಹಕಾರ ನೀಡಬೇಕೆಂದು ಕೋರಿದರು.
ಪುನರ್ವಸತಿ: ನಿಸರ್ಗ ಸಂಸ್ಥೆಯ ಅಧ್ಯಕ್ಷ ರಾಜು ಮಾತನಾಡಿ, ಜಿಲ್ಲೆಯಾದ್ಯಾಂತ 780 ಜನ ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿದ್ದು, ಇವರ ಪುನರ್ವಸತಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ವೃತ್ತಿ ಕೌಶಲ್ಯಾಭಿವೃದ್ಧಿಗಾಗಿ ಸಹಾಯಧನ ಕೊಡಲಾಗುತ್ತಿದೆ. ಇದಕ್ಕೆ ಮೊದಲ ಹಂತದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರತಿ ಫಲಾನುಭವಿಗೆ 20 ಸಾವಿರ ರು.ಗಳಂತೆ ಒಟ್ಟು 38 ಫಲಾನುಭವಿಗಳಿಗೆ ಸಹಾಯ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಅರಸ್, ಕರ್ನಾಟಕ ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ಮಂಜುಳ, ವ್ಯವಸ್ಥಾಪಕ ವೆಂಕಟರೆಡ್ಡಿ, ಗಂಗಾಧರ, ಕರ್ನಾಟಕ ಅಭಿವೃದ್ಧಿ ನಿಗಮದ ಅಧಿಕಾರಿ ಶೋಭಾ, ಸಂಜೀವ್, ಮಲ್ಲೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement