ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ
ಮಾಲೂರು: ಕನ್ನಡ ರಾಜ್ಯೋತ್ಸವವನ್ನು ಎಲ್ಲ ಕನ್ನಡ ಪರ ಸಂಘಟನೆಗಳ ಸಹಕಾರದಲ್ಲಿ ಕರವೇ ಮುಂದಾಳತ್ವದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು. ಪಟ್ಟಣದ ಮಿನಿ ವಿಧಾನ ಸೌಧದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯೋತ್ಸವವನ್ನು ನವಂಬರ್ ಒಂದರಿಂದ ಮೂರು ದಿನಗಳ ಕಾಲ ನಡೆಸಲಾಗುವುದು. 14 ಜನರ ಸಮಿತಿಯನ್ನು ಕರವೇ ಅಧ್ಯಕ್ಷ ಮಂಜುನಾಥ್ಗೌಡ ನೇತೃತ್ವದಲ್ಲಿ ರಚಿಸಲಾಗಿದ್ದು, ತಹಸೀಲ್ದಾರ್ ಸಮ್ಮುಖದಲ್ಲಿ ಸಮತಿ ಅವಶ್ಯವಿದ್ದಾಗ ಸಭೆ ಸೇರಿ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲು ತೀರ್ಮಾನಿಸಲಾಗಿದೆ ಎಂದರು. ತಹಸೀಲ್ದಾರ್ ಡಾ. ಸುಧಾ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಿಸಲು ತಾಲೂಕು ಆಡಳಿತ ಸಂಪೂರ್ಣವಾಗಿ ಸಹಕರಿಸಲಿದ್ದು, ಈ ಸಂಬಂಧ ಚರ್ಚಿಸಲು ಮಂಗಳವಾರ ರಾಜ್ಯೋತ್ಸವ ಸಮತಿ ಸಭೆ ಕರೆಯಲಾಗಿದ್ದು, ಅಂದು ಕಾರ್ಯಕ್ರಮದ ಅಂತಿಮ ರೂಪ ಸಿಗಲಿದೆ ಎಂದರು. ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಲಿಂಗೇಶ್, ಮಹಾರಾಜ ಕನ್ನಡ ಸಂಘದ ರಾಮಮೂರ್ತಿ, ಪುರಸಭೆ ಸದಸ್ಯ ಮುರಳಿಧರ್, ಅಲೂಮಂಜು, ಷಣ್ಮುಖ, ನಾರಾಯಣಗೌಡ, ಶಬ್ಬೀರ್, ಪ್ರದೀಪ್ ರೆಡ್ಡಿ, ತಾಪಂಸದಸ್ಯ ಮೂರ್ತಿ, ಗುಂಡಪ್ಪ, ಬಿಇಓ ಸುಬ್ರಮಣಿ ಇದ್ದರು.