ನಾರು ಉದ್ಯಮ; ಮಹಿಳಾ ಸಂಘಗಳಿಗೆ ಸಹಕಾರ
ಕೋಲಾರ: ನಾರು ಕ್ಷೇತ್ರದಲ್ಲಿ ಭಾರತ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಕೇರಳ ರಾಜ್ಯ ನಾರು ಉದ್ಯಮದಲ್ಲಿ ಮೊದಲ ಸ್ಥಾನದಲ್ಲಿದ್ದು ಕರ್ನಾಟಕ 2ನೇ ಸ್ಥಾನವನ್ನು ಪಡೆಯಲು ವಿಶೇಷವಾದ ಉತ್ತೇಜನ ಮತ್ತು ಒಲವನ್ನು ವ್ಯಕ್ತಪಡಿಸುತ್ತಿದೆ ಎಂದು ಕೇಂದ್ರ ಸರ್ಕಾರದ ನಾರು ಮಂಡಳಿಯ ಅಧ್ಯಕ್ಷ ಪ್ರೊ.ಜಿ. ಬಾಲಚಂದ್ರನ್ ತಿಳಿಸಿದರು.
ಕೋಲಾರ ತಾಲೂಕಿನ ತಂಬಿಹಳ್ಳಿಯಲ್ಲಿ ನಾರು ಮಂಡಳಿಯ ಉಪ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತೆಂಗಿನ ಸಿಪ್ಪೆಯನ್ನು ಮತ್ತು ತೆಂಗಿನ ಚಿಪ್ಪನ್ನು ಬಳಿಸಿ ಅದರಿಂದ ನಾನಾ ವಿವಿಧ ಉತ್ಪನ್ನಗಳನ್ನು ತಯಾರು ಮಾಡಿ ವಿದೇಶಗಳಿಗೆ ರಫ್ತು ಮಾಡಿ ವಿದೇಶಿ ವಿನಿಮಯ ಹೆಚ್ಚಿಸಿಕೊಳ್ಳಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಬೇಡಿಕೆ: ನಾರು ಕ್ಷೇತ್ರಕ್ಕೆ ರು. 250 ಕೋಟಿ ಬಂಡವಾಳ ಹೂಡಲಾಗಿದೆ. ದೇಶದ 40 ರಾಜ್ಯಗಳಲ್ಲಿ ತೆಂಗಿನ ಉತ್ಪಾದನೆ ಹೆಚ್ಚಳದ ಜೊತೆಗೆ ತೆಂಗಿನ ಸಿಪ್ಪೆ, ತೆಂಗಿನ ಚಿಪ್ಪನ್ನು ಸಂಸ್ಕರಣೆ ಮಾಡಿ ಅದರಿಂದ 140 ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳಲಾಗುತ್ತಿದೆ ಎಂದರು.
ಹೆಚ್ಚಿನ ಉತ್ತೇಜನ: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕೊಚ್ಚಿ ಸೇರಿದಂತೆ ಇತರ ಕಡೆಗಳಲ್ಲಿ ನಾರು ಮಂಡಳಿಯ ಕಾರ್ಯಚಟುವಟಿಕೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ರೆಮೋಟ್ ಯೋಜನೆಯಡಿ ಸಾಂಪ್ರದಾಯಿಕ ನಾರು ಮಂಡಳಿಯನ್ನು ತಂತ್ರಜ್ಞಾನ ಮತ್ತು ಆಧುನಿಕ ವಿಧಾನದಲ್ಲಿ ಮೇಲ್ದರ್ಜೆಗೇರಿಸಲು ಗುರಿಯನ್ನು ಹೊಂದಿದೆ. ನಾರು ಘಟಕಗಳ ಸ್ಥಾಪನೆಗಾಗಿ ಮಹಿಳೆ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಉತ್ತೇಜನ ಜೊತೆಗೆ ನಾರು ತೆಗೆಯುವ ಘಟಕಗಳು ಮತ್ತು ಶೇಕಡ 40ರ ಸಬ್ಸಿಡಿಯೊಂದಿಗೆ ಕಿರು ಗುಡಿ ಕೈಗಾರಿಕೆ ಸ್ಥಾಪಿಸಲು ಸಹಾಯ ಮಾಡಲಾಗುವುದೆಂದು ಹೇಳಿದರು.
ತೆಂಗಿನ ಸಿಪ್ಪೆಗೆ 1 ರು.ನಿಗದಿ: ನಾರು ಘಟಕಗಳ ಸ್ಥಾಪನೆ ಹಾಗೂ ನಾರು ಉತ್ಪನ್ನಗಳ ತಯಾರಿಕೆ ಮಾಡುವುದಕ್ಕೆ ಇಚ್ಚಿಸುವವರಿಗೆ ನಾರು ಮಂಡಳಿಯು ಸಾಲ ಸೌಕರ್ಯ ಕಲ್ಪಿಸಲಿದೆ, ಸ್ಫೂರ್ತಿ ಯೋಜನೆ ಹಾಗೂ ಸ್ಫೂರ್ತಿ ಟ್ರಸ್ಟ್ಗಳನ್ನು ಸ್ಥಾಪಿಸಿ ನಾರು ತಯಾರಿಕೆಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡಲು ಬದ್ಧವಾಗಿದೆ ಎಂದು ಮಂಡಳಿಯ ಅಧ್ಯಕ್ಷ ಪ್ರೊ.ಜಿ. ಬಾಲಚಂದ್ರನ್ ತಿಳಿಸಿದರು. ತೆಂಗಿನ ಕಾಯಿಯ ಸಿಪ್ಪೆಯನ್ನು ನಾರಾಗಿ ಪರಿವರ್ತಿಸಿ ಅದರಿಂದ ನಾರಾರು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದಕ್ಕೆ ಅವಕಾಶ ಇರುವುದರಿಂದ ಜನತೆ ತಮ್ಮ ಮನೆಗಳಲ್ಲಿ ತೆಂಗಿನ ಕಾಯಿ ಬಳಕೆ ಮಾಡಿದ ನಂತರ ಅದರ ಸಿಪ್ಪೆ ಮತ್ತು ತೆಂಗಿನ ಚಿಪ್ಪನ್ನು ತಿಪ್ಪೆಗೆ ಹಾಕುವುದು, ಒಲೆಗೆ ಎಸೆಯುವುದನ್ನು ಬಿಟ್ಟು ನಾರು ಮಂಡಳಿಗೆ ನೀಡಿದಲ್ಲಿ ಒಂದು ತೆಂಗಿನ ಕಾಯಿಯ ಸಿಪ್ಪೆಗೆ 1 ರುಪಾಯಿನಂತೆ ಖರೀದಿ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.
ಇನ್ನಷ್ಟು ಹೊಸ ಉತ್ಪನ್ನಗಳನ್ನು ತಯಾರಿಸಲು ಚಿಂತೆ ನಡೆದಿದೆ. ತೆಂಗಿನ ಸಿಪ್ಪೆ ಮತ್ತು ಚಿಪ್ಪನ್ನು ಬಳಸಿ ವಿದ್ಯುತ್ ಉತ್ಪಾನೆ, ಡಿಫೈಬರಿಂಗ್ ಯಂತ್ರಗಳನ್ನು ಬಳಸಿ ನಾರು ಪಾದರ್ಥಗಳ ತಯಾರಿ, ಕಾಗದ.ಕಾಯರ್ ವುಡ್, ನಾರಿನ ಬ್ಯಾಗ್ಗಳು ಸೇರಿದಂತೆ ಕಸುರಿ ಇತ್ಯಾದಿಗಳನ್ನು ನಾರಿನ ಜಿಯೋ-ಜಳವಿ ಮತ್ತು ತಿರುಳಿನ ಉತ್ಪನ್ನಗಳನ್ನು ತಯಾರಿಸಲು ಪ್ರಯತ್ನ ನಡೆಯುತ್ತಿರುವುದರಿಂದ ತೆಂಗಿನ ನಾರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಣೆ ಮಾಡುವ ಉದ್ದೇಶದಿಂದ ಸಿಪ್ಪೆ ಮತ್ತು ಚಿಪ್ಪನ್ನು ಖರೀದಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಿದರು, ಬಂಗಾರಪೇಟೆ ಶಾಸಕ ಕೆ.ಎನ್. ನಾರಾಯಣಸ್ವಾಮಿ ಅದ್ಯಕ್ಷತೆ ವಹಿಸಿದ್ದರು. ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ನಾರು ಮಂಡಳಿಯ ಸದಸ್ಯರಾದ ಕೋಲಾರ ಜಿಲ್ಲೆಯ ಹೊಳಲಿ ಪ್ರಕಾಶ್, ಸಿ. ಗಂಗಾಧರ್, ಮಂಜುನಾಥ್, ಟಿ.ಎಂ. ಶಹೀದ್, ಮಂಗಳೂರಿನ ಅಬ್ದುಲ್ ಖ್ಖಾದರ್, ಜಿಲ್ಲಾಧಿಕಾರಿ ಡಿ.ಕೆ. ರವಿ, ನಾರು ಮಂಡಳಿಯ ಜಂಟಿ ಕಾರ್ಯದರ್ಶಿ ಅನಿಲ್ ಕುಮಾರ್, ಬ್ಯಾಟಪ್ಪ, ಜಿಪಂ ಸದಸ್ಯರಾದ ಡಿ.ವಿ. ಹರೀಶ್, ಅ.ಮು. ಲಕ್ಷ್ಮೀನಾರಾಯಣ, ತಾಪಂ ಸದಸ್ಯ ಆನಂದ್, ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ, ವಡಗೂರು ರಾಮು, ಮಾಜಿ ಶಾಸಕ ನಿಸಾರ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಇದ್ದರು.