ಏಕರೂಪ ಶಿಕ್ಷಣ ನೀತಿ ಜಾರಿ ಭರವಸೆಗೆ ಶ್ಲಾಘನೆ
ಕೋಲಾರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮದಲ್ಲಿ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿ, ನೀತಿ ಜಾರಿಗೆ ಭರವಸೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಕೋಲಾರ ಜಿಲ್ಲಾ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಿಕ್ಷಣದಲ್ಲಿ ತಾರತಮ್ಯ ಹೋಗಲಾಡಿಸಲು ಏಕರೂಪ ಶಾಲಾ ಶಿಕ್ಷಣ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರುವ ಮೂಲಕ ಬದ್ಧತೆ ಉಳಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಸಹಮತ: ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯ ಜಯಕರ್ನಾಟಕ ಸಂಘಟನೆಯು ಹಲವಾರು ವರ್ಷಗಳಿಂದ ಹಾಗೂ ಇತ್ತೀಚೆಗೆ ರಾಜ್ಯಾದಾದ್ಯಂತ ಏಕರೂಪ ಶಿಕ್ಷಣ ಜಾರಿಗೆ ಒತ್ತಾಯಿಸಿ ರಥಯಾತ್ರೆಯನ್ನು ಕೈಗೊಂಡು ಜನರಲ್ಲಿ ಏಕರೂಪ ಶಿಕ್ಷಣದ ಬಗ್ಗೆ ಅರಿವನ್ನು ಮೂಡಿಸಲಾಗಿತ್ತು. ಇದರ ಜೊತೆ ಪ್ರತಿ ತಾಲೂಕು ಹಾಗೂ ಜಿಲ್ಲೆಗಳಿಂದ ಮನವಿ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದರ ಮೂಲಕ ಇದರ ಜಾರಿಗೆ ಒತ್ತಾಯಿಸಲಾಗಿತ್ತು. ಸಾರ್ವಜನಿಕರಿಂದ ಸಹಿಸಂಗ್ರಹಣೆಯನ್ನು ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಿರುವ ಫಲವಾಗಿ ಮುಖ್ಯಮಂತ್ರಿಗಳು ಏಕರೂಪ ಶಾಲಾ ಶಿಕ್ಷಣ ಜಾರಿಗೆ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿರುವುದು ಶ್ಲಾಘನೀಯವಾಗಿದೆ. ಶೀಘ್ರವೇ ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಪ್ರಾಮಾಣಿಕ ಪ್ರಯತ್ನವನ್ನು ಮಾಡಲೆಂದು ತಿಳಿಸಿದ್ದಾರೆ.
ಅ.18ರಂದು ರಾಜ್ಯ ಸಂಘಟನೆ ವತಿಯಿಂದ ಈ ವಿಷಯದ ಬಗ್ಗೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲಲ್ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶ ಹಾಗೂ ಕಾಲ್ನಡಿಗೆ ಜಾಥಾದ ಮುಖಾಂತರ ಸ್ವಾತಂತ್ರ್ಯೋದ್ಯಾನವನದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಏಕರೂಪ ಶಿಕ್ಷಣ ಶಾಲಾ ಜಾರಿ ಬಗ್ಗೆ ಮನವರಿಕೆ ಮಾಡಿ ಒತ್ತಾಯಿಸಲಾಗುವುದು ಎಂದಿದ್ದಾರೆ.