ಬೈಪಾಸ್ ರಸ್ತೆ: ಭೂ ಪರಿಹಾರ ವಿತರಣೆ
ಚಿಕ್ಕಬಳ್ಳಾಪುರ: ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ನೀಡಿ ಭೂ ಪರಿಹಾರಕ್ಕಾಗಿ ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಿರುವುದರ ನಡುವೆ ಜಿಲ್ಲಾಡಳಿತ 40 ಪ್ರಕರಣಗಳನ್ನು ಇತ್ಯರ್ಥಪಡಿಸಿ ತ್ವರಿತವಾಗಿ ಪರಿಹಾರವನ್ನು ನೀಡಲು ಮುಂದಾಗಿದೆ.
ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆ ನಿರ್ಮಾಣವಾದರೂ ಸಹ ವಿವಾದ ಮಾತ್ರ ಬಗೆಹರಿದಿಲ್ಲ.ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ, ಗುಡಿಬಂಡೆ ತಾಲೂಕು ವ್ಯಾಪ್ತಿಯಲ್ಲಿ ರೈತ ಕೃಷಿ ಭೂಮಿಯನ್ನು ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪ್ರಾರಂಭದಲ್ಲಿ ರೈತರಿಗೆ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದರೂ ಸಹ ಆ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ ಮಾಡಿದ ಪರಿಹಾರಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೆಲಸಕ್ಕೆ ಅಡ್ಡಿ: ಈ ನಡುವೆ ಭರವಸೆಯನ್ನು ನೀಡುತ್ತ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಂಡಾಗ ಅನೇಕ ರೈತರು ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿ ಪ್ರತಿಭಟನೆಗಳನ್ನು ನಡೆಸಿದ್ದರು. ಇದಕ್ಕೆ ಜಿಲ್ಲಾಡಳಿತ ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರವನ್ನು ನೀಡುವ ಭರವಸೆ ಕೊಟ್ಟು ಪುನ- ಕಾಮಗಾರಿಯನ್ನು ಪ್ರಾರಂಭಿಸಿದ್ದು, ಇದೀಗ ಬೈಪಾಸ್ ರಸ್ತೆಯಲ್ಲಿ ಹೆಚ್ಚಿಗೆ ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿವೆ. ಇಷ್ಟಾದರೂ ಸಹ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯವನ್ನು ತೋರಿದ್ದು ರೈತರನ್ನು ಮತ್ತೆ ಕೆರಳಿಸಿತ್ತು. ಇದರಿಂದ ರೈತರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪರಿಹಾರ ತಾರತಮ್ಯದ ಬಗ್ಗೆ ಪ್ರಕರಣ ದಾಖಲಿಸಿದ್ದರು. ಜಿಲ್ಲಾಧಿಕಾರಿಗಳು ಸಹ ರೈತರಿಗೆ ಸ್ಪಂದಿಸಿ ಸಭೆಗಳನ್ನು ನಡೆಸಿ ಚರ್ಚೆ ನಡೆಸಿದರೂ ಒಮ್ಮತ ಅಭಿಪ್ರಾಯಕ್ಕೆ ಬರಲಾಗಲಿಲ್ಲ. ಇದರಿಂದ ರೈತರು ಮತ್ತೆ ಹೋರಾಟಕ್ಕೆ ಸಿದ್ಧಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅವರ ಮನಮೊಲಿಸಿ ಪರಿಹಾರವನ್ನು ನೀಡಲು ಮುಂದಾಗಿದೆ. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 362 ಅರ್ಜಿಗಳು ದಾಖಲಾಗಿದ್ದು, ಇದರಲ್ಲಿ ಈಗ 40 ಪ್ರಕರಣಗಳನ್ನು ಇತ್ಯರ್ಥಪಡಿಸಿ ಪರಿಹಾರವನ್ನು ನೀಡಲಾಗುತ್ತಿದೆ. ಉಳಿದ ಪ್ರಕರಣಗಳನ್ನು ಮೂರ್ನಾಲ್ಕು ತಿಂಗಳೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಶಾಲ್ ಆರ್. ತಿಳಿಸಿದ್ದಾರೆ.