ಮುಸ್ಲಿಂ ಸಮುದಾಯದಿಂದ ಬಕ್ರೀದ್ ಆಚರಣೆ
ಕನ್ನಡಪ್ರಭವಾರ್ತೆ , ಕೋಲಾರ , ಅ.17
ತ್ಯಾಗ, ಬಲಿದಾನದ ಹಾಗೂ ಸೋದರತ್ವದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬ ನಗರದಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳು ನಗರದ ವಿವಿಧ ಬಡಾವಣೆಗಳಿಂದ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅನೇಕರು ತಮ್ಮ ಮನೆಗಳ ಬಳಿ ಬಡವರಿಗೆ ಧಾನ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಯಾವುದೇ ಪ್ರಮುಖ ಜನಪ್ರತಿನಿಧಿ ಭಾಗವಹಿಸಿರಲಿಲ್ಲ. ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ನಿಸಾರ್ ಅಹಮ್ಮದ್, ಮುಸ್ಲಿಂ ಸಮುದಾಯದ ಧರ್ಮಗುರುಗಳಾದ ಮೌಲ್ವಿ ಮುಸ್ತಾಫಾ ಸಾಬ್, ಝನ್ವಿಲ್ ಅಲಿದ್ ಮತ್ತಿತರರು ಇದ್ದರು.
ರಂಜಾನ್ ಹಬ್ಬದ ಸಂದರ್ಭದಲ್ಲಿ ಕಂಡು ಬಂದಿದ್ದ ಅವ್ಯವಸ್ಥೆಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಖುದ್ದು ನಿಂತು ವಿದ್ಯುತ್, ನೀರು, ಸ್ವಚ್ಛತೆಗೆ ಕುಂದುಬಾರದಂತೆ ನೋಡಿಕೊಂಡರು.
ಶುಭಾಶಯ ವಿನಿಮಯ
ಕೆಜಿಎಫ್: ಕೆಜಿಎಫ್ ನಗರ ಹಾಗೂ ಗ್ರಾಮೀಣ ಭಾಗದ ಮುಸ್ಲಿಂ ಸಮುದಾಯದಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಇಂದು ಬೆಳಗ್ಗೆ ನಗರದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂ ಸಹೋದರರು ನಂತರ ಅಶೋಕ್ನಗರ ಹಾಗೂ ಚಾಂಪಿಯನ್ರೀಫ್ ಪ್ರದಶದಲ್ಲಿರುವ ಈದ್ಗಾ ಮೈದಾನದಲ್ಲಿ ಎಲ್ಲರೂ ಒಗ್ಗೂಡಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರ್ಥನೆಯನ್ನು ಮುಗಿಸಿಕೊಂಡು ಹೊರಬರುತ್ತಿದ್ದಂತೆ ಪರಸ್ಪರ ಒಬ್ಬರನ್ನೊಬ್ಬರು ಅಪ್ಪಿಕೊಂಡು ಬಕ್ರೀದ್ ಹಬ್ಬದ ಶುಭಾಷಯಗನ್ನು ಕೋರಿದರು.
ಶುಭಾಶಯ: ಬಕ್ರೀದ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಪ್ರರ್ಥನೆಯನ್ನು ಮುಗಿಸಿಕೊಂಡು ಹೋರ ಬರುತ್ತಿದ್ದ ಮುಸ್ಲಿಂ ಕುಲಬಾಂದವರನ್ನು ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ವೈ. ಸಂಪಂಗಿ, ಎಂ. ಭಕ್ತವತ್ಸಲಂ, ಎಸ್. ರಾಜೇಂದ್ರನ್, ಮುಖಂಡರಾದ ದಾಸ್ಚಿನ್ನಸವರಿ, ಅನ್ಬು, ವಳ್ಳಲ್ಮುನಿಸ್ವಾಮಿ, ಡಿ.ಜಯಪಾಲ್, ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಇತರೆ ಸಂಘ ಸಂಸ್ಥೆಗಳ ಕಾರ್ಯಕರ್ತರು ಪರಸ್ಪರ ಅಪ್ಪಿಕೊಂಡು ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
ಬಂದೋಬಸ್ತ್: ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ನಗರದ ಮಸೀದಿಗಳ ಮುಂದೆ, ನಗರದ ಪ್ರಮುಖ ರಸ್ತೆಗಳಲ್ಲಿ ಈದ್ಗಾ ಮೈದಾನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಈ ವೇಳೆ ಡಿವೈಎಸ್ಪಿಗಳಾದ ಹೆಚ್.ಪಿ. ರಾಜಣ್ಣ, ವಿವೇಕಾನಂದ, ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ, ಪಿಎಸ್ಐಗಳಾದ ಮಾರ್ಕೊಂಡಪ್ಪ, ರಂಗಶಾಮಯ್ಯ, ಆಂಜಪ್ಪ, ಮಧುಸೂದನ್, ಸುರೇಶ್, ನಾರಾಯಣಸ್ವಾಮಿ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.
ಬಕ್ರೀದ್: ಮುಸ್ಲಿಮರಿಗೆ ಶುಭ ಕೋರಿದ ಎಸ್ಪಿ
ಚಿಂತಾಮಣಿ: ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಶಿವಪ್ರಸಾದ್ ಶುಭ ಕೋರಿದ್ದಾರೆ.
ಪಟ್ಟಣದ ಬಾಗೇಪಲ್ಲಿ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಮರು ಬಕ್ರೀದ್ ಹಬ್ಬಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದಾಗ ಖುದ್ದು ಪೊಲೀಸ್ ಪಕ್ಷಣಾಧಿಕಾರಿ ಶಿವಪ್ರಸಾದ್ ಭೇಟಿ ನೀಡಿ ಮುಸ್ಲಿಮರಿಗೆ ಸಿಹಿ ತಿನ್ನಿಸುವ ಮೂಲಕ ಶುಭ ಹಾರೈಸಿದರು.
ಶಾಂತಿ-ಸ್ನೇಹದಿಂದ ಬಕ್ರೀದ್ ಆಚರಿಸಿ ಅಲ್ಲಾ ದೇವರ ಆಶೀರ್ವಾದ ಪಡೆದು ಸಮಾಜದಲ್ಲಿ ಶಾಂತಿಯಿಂದ ಬದುಕಲು ಸಲಹೆ ನೀಡಿದರು. ಇದೇ ವೇಳೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮುಸ್ಲಿಮರು ಶಾಂತಿಯುತವಾಗಿ ಮೆರವಣಿಗೆ ನಡೆಸಿ ಈದ್ಗಾ ಮೈದಾನದಲ್ಲಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರು.
ಪ್ರಾರ್ಥನೆ, ಮೆರವಣಿಗೆ
ಶಿಡ್ಲಘಟ್ಟ: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈದ್-ಉಲ್-ಅಝ್ಹಾ ಬಕ್ರಿದ್ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಗಳಿಂದ ಆಚರಣೆ ಮಾಡಿದರು.
ಪಟ್ಟಣದ ಐತಿಹಾಸಿಕ ಜಾಮೀಯಾ ಮಸೀದಿಯಿಂದ ಮೆರವಣಿಗೆಯಲ್ಲಿ ಹೊರಟ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮೀಲಾದ್ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ವಿಶ್ವದ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ರೇಷ್ಮೆ ವ್ಯಾಪಾರವನ್ನೆ ಮುಖ್ಯ ಕಸುಬನ್ನಾಗಿಸಿಕೊಂಡಿರುವ ಮುಸ್ಲಿಂ ಬಾಂಧವರು ರೈತರನ್ನು ಬಕ್ರೀದ್ ಹಬ್ಬದ ಅಂಗವಾಗಿ ತಮ್ಮ ಮನೆಗಳಿಗೆ ಆಹ್ವಾನಿಸಿ ಸಿಹಿಯನ್ನು ನೀಡಿ, ಶುಭವನ್ನು ಕೋರಿದರು.