ಮೇಲು ಸೇತುವೆ ನಿರ್ಮಾಣಕ್ಕೆ ಒತ್ತಾಯ
ಕ.ಪ್ರ.ವಾರ್ತೆ , ಮುಳಬಾಗಲು , ಅ.16
ಪಟ್ಟಣದ ಹೊರವಲಯದ ಕೆಜಿಎಫ್ ಬೈಪಾಸ್ ಬಳಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮೇಲು ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಮಂಗಳವಾರ ರಾಷ್ಚ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಾಷ್ಚ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕವಾಗಿ ಚತುಷ್ಪಥ ರಸ್ತೆ ನಿರ್ಮಿಸುತ್ತಿದ್ದು ಮೇಲು ಸೇತುವೆ ಅಂಡರ್ ಪಾಸ್ ರಸ್ತೆಗಳನ್ನು ನಿರ್ಮಿಸದೆ ಇರುವುದರಿಂದ ರಾಷ್ಚ್ರೀಯ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದೆ ಎಂದು ಪ್ರತಿಭಟನಾಕಾರಾರು ದೂರಿದರು.
ಮುನ್ನೆಚ್ಚರಿಕೆ ಇಲ್ಲ: ವಿದ್ಯಾರ್ಥಿಗಳು, ರೈತರು, ಮಹಿಳೆಯರು ಪಟ್ಟಣಕ್ಕೆ ಬರಬೇಕಾದರೆ ರಾಷ್ಟ್ರೀಯ ಹೆದ್ದಾರಿ ದಾಟೆಕೊಂಡು ಹೋಗಬೇಕಾಗಿದೆ. ವಿದ್ಯಾರ್ಥಿಗಳ ಹರಸಾಹಸ ಪಟ್ಟು ಕಾಲೇಜುಗಳಿಗೆ ತೆರಳಬೇಕಾಗಿದೆ. ಆದರೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಹಾಗೂ ಜಿಲ್ಲಾಧ್ಯಕ್ಷ ಕೊತ್ತಮಿರಿ ಮಂಜುನಾಥ್ ದೂರಿದರು.
ವಾಹನಗಳು ಸ್ಥಗಿತ: ಪ್ರತಿಭಟನಾಕಾರರು ಬೈಪಾಸ್ ರಸ್ತೆ ಬಂದ್ ಮಾಡಿದ ಕಾರಣ ಬೆಂಗಳೂರು-ತಿರುಪತಿ ಮತ್ತಿತರ ಕಡೆ ತೆರಳಬೇಕಾಗಿದ್ದ ವಾಹನಗಳು ಸ್ಥಗಿತಗೊಂಡು ಸುಮಾರು ಎರಡು ಕಿಮೀನಷ್ಟು ಉದ್ದಕ್ಕೂ ವಾಹನಗಳು ಸಾಲುಗಟ್ಟಿದ್ದವು. ಜನಪ್ರತಿನಿಧಿಗಳು ಈ ಬಗ್ಗೆ ತಿಳಿದಿದ್ದರೂ ಸಹ ಜಾಣಕಿವುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ಕನಿಷ್ಟ ಮೇಲು ಸೇತುವೆಗಳನ್ನು ನಿರ್ಮಿಸಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲದೇ ಹೆದ್ದಾರಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆಂದು ಆರೋಪಿಸಿದರು.
ತಹಶೀಲ್ದಾರ್ ಡಿ.ವಿ. ರಾಮಮೂರ್ತಿ, ಸಬ್ ಇನ್ಸ್ಪೆಕ್ಟರ್ ಮೇಲ್ವಿನ್ ಫ್ರಾನ್ಸಿಸ್ ಮನವಿ ಪತ್ರ ಸ್ವೀಕರಿಸಿದರು. ರೈತ ಮುಖಂಡ ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷ ಜಯರಾಮಪ್ಪ, ಉಪಾಧ್ಯಕ್ಷ ಕೆ. ಲೋಕೇಶ್, ವಕೀಲ ದಶರಥ್, ಮುಖಂಡರಾದ ಶ್ರೀನಿವಾಸ್, ಕಾರ್ಯಾಧ್ಯಕ್ಷ ಧನಂಜಯ, ಸಂಘಟನಾ ಕಾರ್ಯದರ್ಶಿಗಳಾದ ಚಿನ್ನಪ್ಪಯ್ಯ, ಖಾಸಗಿ ಬಸ್ ಮಾಲೀಕರ ಸಂಘದ ದೇವರಾಜ್, ಅಬ್ಬಾಸ್ ಬಾಬು, ರಾಧಕೃಷ್ಣ ಭಾಗವಹಿಸಿದ್ದರು.