ಕಾಲುಬಾಯಿ ಜ್ವರ; ಶೀಘ್ರ ಪರಿಹಾರ
ಕ.ಪ್ರ. ವಾರ್ತೆ ಕೋಲಾರ ಅ.18
ಕಾಲುಬಾಯಿ ಜ್ವರದಿಂದ ಜಿಲ್ಲೆಯಲ್ಲಿ ಸತ್ತಿರುವ ರಾಸುಗಳಿಗೆ ಸಂಬಂಧಿಸಿದಂತೆ ಅ.23ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿದ ನಂತರ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ಜಿಲ್ಲೆಯಲ್ಲಿ 871 ಹಸುಗಳು ಕಾಲುಬಾಯಿ ಜ್ವರದಿಂದ ಸುತ್ತಿರುವುದಾಗಿ ಮಾಹಿತಿ ಇದ್ದು, ಅ.23ರ ಕೆಡಿಪಿ ಸಭೆಯಲ್ಲಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿ ಪಡೆಯುವುದಾಗಿ ಹೇಳಿದರು.
ಸರ್ಕಾರ ಈಗಾಗಲೇ ಪರಿಹಾರ ನೀಡಲು ನಿರ್ಧರಿಸಿದೆ, ಜಿಲ್ಲೆಯಲ್ಲಿ ಅತಿ ಹೆಚ್ಚು ಹಸುಗಳು ಸತ್ತಿರುವುದಾಗಿ ಹೇಳಲಾಗುತ್ತಿದ್ದು, ಅಧಿಕಾರಿಗಳಿಂದ ಮರಣ ಹೊಂದಿರುವ ರಾಸುಗಳ ಪಟ್ಟಿ ಪಡೆದ ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಅಕ್ರಮ ಮರಳು ಸಾಗಾಣೆಗೆ ಅವಕಾಶವಿಲ್ಲ: ಜಿಲ್ಲೆಯ ಕೆರೆಗಳಲ್ಲಿ ಮರಳು ಫಿಲ್ಟರ್ ಮಾಡುವುದನ್ನು ತಡೆಯಲು ಹಾಗೂ ಅಕ್ರಮ ಮರಳು ಸಾಗಾಣೆ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಕೊಂಚ ಮಟ್ಟಿಗೆ ತಹಬದಿಗೆ ಬಂದಿದೆ. ಮರಳು ನೀತಿ ಜಾರಿಗೊಂಡಲ್ಲಿ ಮರಳು ದಂಧೆಗೆ ಇತಿಶ್ರೀ ಹಾಡಲು ಸಾಧ್ಯವಿದೆ ಎಂದು ಸಚಿವ ಖಾದರ್ ಅಭಿಪ್ರಾಯಪಟ್ಟರು.
ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ತಕ್ಕಮಟ್ಟಿಗೆ ಸುಧಾರಣೆ ಆಗಿದೆ. ಆಯಕಟ್ಟಿನ ಜಾಗಕ್ಕೆ ಬೇಕಾಗಿದ್ದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅ.23ರ ಸಭೆಯಲ್ಲಿ ಯಾರು ಅಧಿಕಾರ ಸ್ವೀಕರಿಸಿದ್ದಾರೆ, ಯಾರು ಬಂದಿಲ್ಲವೆಂಬುದು ಗೊತ್ತಾಗಲಿದೆ. ವರ್ಗಾವಣೆಯ ಆದೇಶ ಉಲ್ಲಂಘನೆ ಯಾರಾದರೂ ಮಾಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಗೂ ಉತ್ತಮ ಅಧಿಕಾರಿಯನ್ನು ನಿಯೋಜಿಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ತಿಳಿಸಿದ್ದಾರೆ, ಎಲ್ಲಾ ಇಲಾಖೆಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಆಡಳಿತದಲ್ಲಿ ಇನ್ನಷ್ಟು ಬದಲಾವಣೆ ಆಗಲಿದೆ ಎಂದರು. ಆರೋಗ್ಯ ಇಲಾಖೆಯಲ್ಲೂ ಸಾಕಷ್ಟು ಸುಧಾರಣೆ ಆಗಿದೆ.ಎಲ್ಲ ಕಡೆ ವೈದ್ಯ, ಸಿಬ್ಬಂದಿ ಕೊರತೆ ನೀಗಿಸಲಾಗುತ್ತಿದೆ.
ಇನ್ನೂ ಸಾಕಷ್ಟು ಸಮಸ್ಯೆ ಇದೆ. ಇದನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದ ಅವರು, ಆಶಾ ಕಾರ್ಯಕರ್ತರಿಗೆ ಗೌರವಧನ ಹೆಚ್ಚಿಸಲು ಸಚಿವ ಸಂಪುಟದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಶಾಲಾ ಮಕ್ಕಳ ಆರೋಗ್ಯ ಸುರಕ್ಷತೆಗಾಗಿ ಸಂಚಾರಿ ತಂಡ ಸಿದ್ಧಪಡಿಸಿ ಪ್ರತೇಕ ವಾಹನ, ವೈದ್ಯ,ನರ್ಸ್ಗಳನ್ನು ಒದಗಿಸಲಾಗುತ್ತಿದೆ. ಕೆಲವು ಕಡೆ ಚಾಲನೆ ಸಿಕ್ಕಿದೆ, ಕೋಲಾರ ಜಿಲ್ಲೆಯಲ್ಲಿ ಅದಷ್ಟು ಬೇಗನೆ ಕಾರ್ಯಕ್ರಮ ಉದ್ಘಾಟಿಸುವುದಾಗಿ ತಿಳಿಸಿದರು.