ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೊಂದಲದ ನಡುವೆ ವಾಲ್ಮೀಕಿ ಜಯಂತಿ

Vishwanath S
Updated On : 19 Oct 2013, 12:23 pm

ಕ.ಪ್ರ.ವಾರ್ತೆ ,  ಚಿಕ್ಕಬಳ್ಳಾಪುರ ,  ಅ. 18
ಒಂದು ಕಡೆ ವಾಲ್ಮೀಕಿ ಜನಾಂಗದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತದ ವತಿಯಿಂದ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು.
ಆದರೆ, ಕಾರ್ಯಕ್ರಮದಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಭಾಗವಹಿಸದೇ ನಿರ್ಲಕ್ಷ್ಯ ತೋರಿದ್ದು ಪ್ರಮುಖವಾಗಿ ಕಂಡು ಬಂದಿತು. ಇತ್ತ ಕಾರ್ಯಕ್ರಮದಿಂದ ದೂರ ಉಳಿದು ಹೋರಾಟದಲ್ಲಿ ಮುಖಂಡರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಕೇವಲ ಅಧಿಕಾರಿಗಳೇ ಕಾರ್ಯಕ್ರಮದಲ್ಲಿ ತುಂಬಿ ತುಳುಕಾಡುತ್ತಿದ್ದರು.
ಇದಕ್ಕೂ ಮುನ್ನಾ ನಗರದ ಶ್ರೀ ಮರಳು ಸಿದ್ದೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ವಿಶಾಲ್ ಚಾಲನೆ ನೀಡಿದರು. ಡೊಳ್ಳು ಕುಣಿತ, ವೀರಗಾಸೆ, ಕೀಲು ಕುದುರೆ, ಗಾರುಡಿ ಗೊಂಬೆ, ವೀರಗಾಸೆ, ತಮಟೆ ವಾದ್ಯ, ಪೂಜಾ ಕುಣಿತ ಸೇರಿದಂತೆ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ವಿವಿಧ ಇಲಾಖೆಗಳಿಂದ ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಎಂ.ಜಿ. ರಸ್ತೆಯಿಂದ ಶಿಡ್ಲಘಟ್ಟ ವೃತ್ತದ ಮಾರ್ಗವಾಗಿ ಬಿ.ಬಿ. ರಸ್ತೆಯಲ್ಲಿ ಸಾಗಿ ಒಕ್ಕಲಿಗರ ಕಲ್ಯಾಣ ಮಂಟದವರೆಗೂ ಹೊರಟ ಮೆರವಣಿಗೆಯಲ್ಲಿ ಕಳೆದ ವರ್ಷಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಜನರು ಕಂಡು ಬಂದರು.
ಜನಪ್ರತಿನಿಧಿಗಳು ಗೈರು: ಜಿಲ್ಲಾಡಳಿತದ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಕಂಡು ಬರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಶಾಸಕ ಡಾ.ಕೆ. ಸುಧಾಕರ್, ಜಿಲ್ಲೆಯ ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಕಾರ್ಯಕ್ರಮದ ಕಡೆ ಸುಳಿಯಲೇ ಇಲ್ಲ. ಇದು ಸಹಜವಾಗಿ ಅಸಮಾಧಾನಕ್ಕೆ ಕಾರಣವಾಯಿತು. ವಾಲ್ಮೀಕಿ ಜನಾಂಗದ ಮುಖಂಡರು ಪ್ರತಿಭಟನೆ ನಡೆಸಿ ಕಾರ್ಯಕ್ರಮದಿಂದ ದೂರ ಉಳಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಭಾಗವಹಿಸಲಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು.
ತರಾತುರಿ ಕಾರ್ಯಕ್ರಮ: ವಾಲ್ಮೀಕಿ ಜಯಂತಿ ಕಾರ್ಯಕ್ರಮ ತರಾತುರಿಯಲ್ಲಿಯೇ ಮುಗಿಯಿತು. ಜಿಲ್ಲಾ ರಕ್ಷಣಾಧಿಕಾರಿ ಡಾ. ಶಿವಪ್ರಸಾದ್ ಅವರನ್ನು ಹೊರತುಪಡಿಸಿದರೆ ಇತರರಿಂದ ಹೆಚ್ಚಿನ ಭಾಷಣವೇ ಕೇಳಿ ಬರಲಿಲ್ಲ. ವಾಲ್ಮೀಕಿ ಮಹರ್ಷಿ ಬಗ್ಗೆಯೂ ಉಪನ್ಯಾಸ ನೀಡುವುದು ರದ್ದಾಗಿತ್ತು. ಇನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಪರಿಶಿಷ್ಟ ಜನಾಂಗದವರ ಏಳಿಗೆಗೆ ಶ್ರಮಿಸಿದ ತಾಲ್ಲೂಕಿಗೆ ಒಬ್ಬರಂತೆ ಆರು ಜನರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತಾದರೂ ಕೇವಲ ಇಬ್ಬರಿಗಷ್ಟೇ ಸನ್ಮಾನ ಮಾಡಲಾಯಿತು. ಸನ್ಮಾನಕ್ಕಾಗಿ ಕಾದು ಕುಳಿತಿದ್ದವರು ತರಾತುರಿ ಕಾರ್ಯಕ್ರಮವನ್ನು ನೋಡಿ ಹಾಗೆಯೇ ವಾಪಸ್ಸಾದರು. ಕೆಲವೇ ಕೆಲ ಫಲಾನುಭವಿಗಳಿಗೆ ಸಹಾಯ ಧನವನ್ನು ಕೊಟ್ಟು ಅಧಿಕಾರಿಗಳು ತಮ್ಮ ಕೈ ತೊಳೆದುಕೊಂಡರು. ಅಧಿಕಾರಿಗಳ ಮಧ್ಯೆ ವಾಲ್ಮೀಕಿ ಜಯಂತಿ ಕೇವಲ ಅಧಿಕಾರಿಗಳ ಕಾರ್ಯಕ್ರಮ ಎನ್ನುವಂತೆ ನಡೆಯಿತು ಎಂಬ ಟೀಕೆಗಳು ಕೇಳಿ ಬಂದವು.
ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ : ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಸಂದರ್ಭದಲ್ಲಿ ಅಡ್ಡಿ ಆತಂಕಗಳುಂಟಾದರೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕಷ್ಟೇ ಎಂದು ಜಿಲ್ಲಾಧಿಕಾರಿ ವಿಶಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮಾಯಣದಲ್ಲಿ ಭರತ ಬಂದು ವನವಾಸದಲ್ಲಿದ್ದ ತನ್ನ ಅಣ್ಣನಿಗೆ ಅಯೋಧ್ಯೆಯಲ್ಲಿ ಆಡಳಿತ ನಡೆಸಬೇಕೆಂದು ಕೇಳಿಕೊಳ್ಳುತ್ತಾನೆ. ಇದಕ್ಕೆ, ನನ್ನ ಆತ್ಮಸಾಕ್ಷಿ ಒಪ್ಪಲ್ಲ ಅಂತಾ ರಾಮ ಹೇಳಿ ತಿರಸ್ಕರಿಸುತ್ತಾನೆ. ಇದು ಪ್ರತಿಯೊಬ್ಬರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಹೊಂದಿದೆ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ.ಎನ್. ಶಿವಪ್ರಸಾದ್ ಮಾತನಾಡಿ, ಶೋಷಿತ ವರ್ಗದಲ್ಲಿ ಜನಿಸಿದರೂ ಕನಕದಾಸರು, ಅಂಬೇಡ್ಕರ್, ವಾಲ್ಮೀಕಿ ಮಹರ್ಷಿ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಜಗತ್ತಿಗೆ ಚೈತನ್ಯ ನೀಡಿದರು. ಅದೇ ರೀತಿ ನಾವು ನೈತಿಕತೆಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಉಪ ಕಾರ್ಯದರ್ಶಿ ಚಂದ್ರಪ್ಪ, ಉಪ ವಿಭಾಗಾಧಿಕಾರಿ ಶಾಂತಲಾ, ತಹಸೀಲ್ದಾರ್ ನಟೇಶ್, ಉಪನ್ಯಾಸಕ ಪ್ರೊ. ಕೋಡಿರಂಗಪ್ಪ ಉಪಸ್ಥಿತರಿದ್ದರು.

ಕಾಟಾಚಾರಕ್ಕೆ ಜಯಂತಿ
ಚಿಕ್ಕಬಳ್ಳಾಪುರ:
ಜಿಲ್ಲಾಡಳಿತ ತಮ್ಮನ್ನು ಕಡೆಗಣಿಸಿರುವುದರ ಜತೆಗೆ ಮಹರ್ಷಿ ವಾಲ್ಮೀಕಿ ದಿನಾಚರಣೆಯನ್ನು ಕೇವಲ ಕಾಟಾಚಾರಕ್ಕೆ ನಡೆಸುತ್ತಿದೆ ಎಂದು ಆರೋಪಿಸಿ ವಾಲ್ಮೀಕಿ ಮಹಾಸಭಾ ಮುಖಂಡರು ಪ್ರತಿಭಟನೆ ನಡೆಸಿ, ಕಾರ್ಯಕ್ರಮದಿಂದ ದೂರ ಉಳಿಯುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತದ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿಯನ್ನುಂಟು ಮಾಡುವುದಿಲ್ಲ. ಕೇವಲ ಕಾಟಾಚಾರಕ್ಕೆ ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಿಡಿಕಾರಿದ ವಾಲ್ಮೀಕಿ ಸಂಘದ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ವಾಲ್ಮೀಕಿ ಮಹರ್ಷಿಯ ಮೆರವಣಿಗೆ ಮುಗಿಯುತ್ತಿದ್ದಂತೆ ನಗರದ ಪ್ರವಾಸಿ ಮಂದಿರದಿಂದ ಬಲಮುರಿ ಗಣಪತಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಲ್ಲೆಡೆ ಸರ್ಕಾರದಿಂದ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆದರೆ, ಇಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿ ಕಾಟಾಚಾರಕ್ಕೆ ಕಾರ್ಯಕ್ರಮವನ್ನು ಆಚರಿಸುತ್ತಿದೆ. ಕಾರ್ಯಕ್ರಮದ ಸಿದ್ಧತೆಗಳನ್ನು ಕೈಗೊಳ್ಳಲು ಚರ್ಚಿಸುವ ಸಲುವಾಗಿ ಸರಿಯಾಗಿ ಪೂರ್ವಭಾವಿ ಸಭೆ ನಡೆಸಲಿಲ್ಲ. ಅಲ್ಲದೇ ವಾಲ್ಮೀಕಿ ಜನಾಂಗದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ. ಕೇವಲ ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ಈ ಹಿಂದೆ ಜಿಲ್ಲಾಡಳಿತ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿ ಜನರರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ವರ್ಷ ಜಿಲ್ಲಾಧಿಕಾರಿ ವಿಶಾಲ್ ಅವರ ನಿರ್ಲಕ್ಷ್ಯ ಧೋರಣೆಯು ಅಸಮಾಧಾನವನ್ನುಂಟು ಮಾಡಿದೆ ಎಂದು ಆರೋಪಿಸಿದರು.
ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಭಿತ್ತಿ ಫಲಕಗಳನ್ನಡಿದುಕೊಂಡು ಸಾಗಿದ ಪ್ರತಿಭಟನಾಕಾರರಲ್ಲಿ ಕೆಲವರು ಜಿಲ್ಲಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದ ನಗರದ ಒಕ್ಕಲಿಗರ ಕಲ್ಯಾಣ ಮಂಟಪಕ್ಕೆ ಪ್ರತಿಭಟನಾಕಾರರು ತೆರಳದಂತೆ ಬಲಮುರಿ ಗಣಪತಿ ವೃತ್ತದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪ್ರತಿಭಟನೆಯಲ್ಲಿ ವಾಲ್ಮೀಕಿ ಮಹಾಸಭಾದ ಎನ್. ಸುಬ್ಬರಾಯಪ್ಪ, ಕೆ.ಟಿ. ನಾರಾಯಣಸ್ವಾಮಿ, ಮೂರ್ತಿ, ಶ್ರೀನಿವಾಸ್ ಭಾಗವಹಿಸಿದ್ದರು.

ಶಿಡ್ಲಘಟ್ಟದಲ್ಲಿ ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
ಶಿಡ್ಲಘಟ್ಟ:
ತಾಲೂಕಿನ ವಾಲ್ಮೀಕಿ ಜನಾಂಗದವರು ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು. ಪಟ್ಟಣದ ಮಯೂರ ವೃತ್ತದ ಬಳಿ ಇರುವ ವಾಲ್ಮೀಕಿ ದೇವಾಲಯದಿಂದ ವಾಲ್ಮೀಕಿ ಭಾವಚಿತ್ರವನ್ನು ಹೊತ್ತ ಹೂವಿನ ಪಲ್ಲಕ್ಕಿ ಮೆರವಣಿಗೆ ಮಂಗಳ ವಾದ್ಯಗಳೊಂದಿಗೆ ಕುದುರೆ ಸಾರೋಟ, ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಅಕರ್ಷಣೀಯವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ. ರಾಜಣ್ಣ, ರಾಮಯಣ ಮಹಾಗ್ರಂಥವನ್ನು ಕೊಡುಗೆ ನೀಡಿದ ದಾರ್ಶನಿಕ ವಾಲ್ಮೀಕಿ ಎಂದರು. ತಾಪಂ ಅಧ್ಯಕ್ಷ ಯರಭಚ್ಚಪ್ಪ ಮಾತನಾಡಿದರು. ಟಿ.ಎಸ್. ವಿಜಯಶಂಕರ್ ವಾಲ್ಕೀಕಿ ಜೀವನ ಚರಿತ್ರೆಯನ್ನು ಮುಖ್ಯ ಭಾಷಣದಲ್ಲಿ ತಿಳಿಸಿದರು. ಬಂಕ್ ಮುನಿಯಪ್ಪ, ಎನ್. ಮುನಿಯಪ್ಪ ಮಾತನಾಡಿದರು. ತಹಸೀಲ್ದಾರ್ ಜಿ.ಎ. ನಾರಾಯಣಸ್ವಾಮಿ, ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ, ಡಾ. ಧನುಜಯರೆಡ್ಡಿ, ಬ್ಯಾಂಕ್ ರಾಮಚಂದ್ರಪ್ಪ, ರಾಜೇಂದ್ರ, ಪಿ.ವಿ. ನಾಗರಾಜ್, ಮುಗಲಡಪಿ ನಂಜಪ್ಪ, ಶಿವಾರೆಡ್ಡಿ, ಕೆ. ಮಂಜುನಾಥ್ ಇದ್ದರು.

ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆ
ಗೌರಿಬಿದನೂರು:
ವಾಲ್ಮೀಕಿ ರಾಮಾಯಣ ವರ್ಣಾತೀತ ಗ್ರಂಥ ಇದರ ತತ್ವಗಳು ಇಂದಿಗೂ ಅಮರವಾಗಿದೆ ಎಂದು ವಿಧಾನ ಸಭಾ ಉಪಾಸಭಾಸಧ್ಯಕ್ಷ ಎನ್.ರ್ಚ್. ಶಿವಶಂಕರರೆಡ್ಡಿ ತಿಳಿಸಿದರು. ತಾಲೂಕು ಆಡಳಿತ, ತಾಪಂ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ವಾಲ್ಮೀಕಿ ಭವನಕ್ಕೆ ಶಂಕು ಸ್ಥಾಪನೆ ನಡೆದಿದ್ದು ಅದರ ಅಂದಾಜು ವೆಚ್ಚ ಒಂದು ಕೋಟಿ ಆಗಲಿದೆ. ಈಗಾಗಲೇ ಐವತ್ತು ಲಕ್ಷ ಬಿಡುಗಡೆಯಾಗಿದ್ದು, ಮುಂದಿನ ವರ್ಷದಲ್ಲಿ ಭವನ ಪೂರ್ತಿಮಾಡುವುದಾಗಿ ಭರವಸೆಕೊಟ್ಟರು. ಪ್ರಧಾನ ಭಾಷಣಕಾರರಾಗಿ ಟಿ. ಸದಾಶಿವ ಮಾತನಾಡಿ, ಏಕಲವ್ಯ ಗುರುಕಾಣಿಕೆಯಾಗಿ ತನ್ನ ಹೆಬ್ಬೆರಳನ್ನೆ ಕಾಣಿಕೆಕೊಟ್ಟು ಆದರ್ಶನಾಗಿದ್ದಾನೆ. ಸಾಕ್ಷಾತ್ ಪರಮಶಿವನಿಗೆ ಕಣ್ಣನ್ನು ದಾನಮಾಡಿದ ಮಹಾನ್ ಪುರುಷ ಬೇಡರಕಣ್ಣಪ್ಪ ಮತ್ತು ದಾರ್ಶನಿಕ ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದ್ದಾರೆ ಎಂದರು.
ವಾಲ್ಮೀಕಿ ಜನಾಂಗದ ಆರ್. ಅಶೋಕ್ ಕುಮಾರ್, ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಹಿತವಚನ ಹೇಳಿದರು. ಜನಾಂಗದ ಗಣ್ಯರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದಲ್ಲಿ ವಾಲ್ಮೀಕಿ ಮೆರವಣಿಗೆ ಮಾಡಲಾಯಿತು. ತಾಲೂಕು ದಂಡಾಧಿಕಾರಿ ಭಾಸ್ಕರ್, ಬಾಬಣ್ಣ, ನಾರಾಯಣಸ್ವಾಮಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement