ಜನಾಂಗಕ್ಕೆ ಬೇಕು ಶಿಕ್ಷಣ
ಬಂಗಾರಪೇಟೆ: ವಾಲ್ಮೀಕಿ ಜನಾಂಗದವರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದೆ ಬಂದಾಗ ಮಾತ್ರ ಸರ್ಕಾರದ ಯೋಜನೆಗಳು ದೊರೆಯಲು ಸಾಧ್ಯ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕು ಆಡಳಿತವತಿಯಿಂದ ಹಮ್ಮಿಕೊಂಡಿದ್ದ ವಾಲ್ಮಿಕಿ ಜಯಂತಿಗೆ ಚಾಲನೆ ನೀಡಿ ಮಾತನಾಡಿ, ವಾಲ್ಮಿಕಿ ಜನಾಂಗದವರು ಅಕ್ಷರ ಜ್ಞಾನ ಹೊಂದಬೇಕು ಎಂದರು. ವಾಲ್ಮಿಕಿ ಜನಾಂಗದಲ್ಲಿ ಒಡಕನ್ನು ತರಲು ಕೆಲವರು ವಾಲ್ಮಿಕಿ ಜಯಂತಿಯನ್ನು ಕಾಮಸಮುದ್ರದಲ್ಲಿ ಪ್ರತ್ಯೇಕವಾಗಿ ಆಚರಣೆ ಮಾಡುತ್ತಿರುವುದನ್ನು ಶಾಸಕರು ತೀವ್ರವಾಗಿ ಖಂಡಿಸಿದರು. ತಹಸೀಲ್ದಾರ್ ಉಷಾ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಶಿಕ್ಷಕ ವೆಂಕಟೇಶ್ ಮಾತನಾಡಿದರು. ವಾಲ್ಮಿಕಿ ಜನಾಂಗದಿಂದ ಉತ್ತಮವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪಲ್ಲವಿಮಣಿ ನಗದು ಬಹುಮಾನ ನೀಡಿದರು. ಇದಕ್ಕೂ ಮೊದಲು ಸ್ಥಬ್ಧ ಚಿತ್ರಗಳ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ತಾಪಂ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಸಂಪಂಗಿರೆಡ್ಡಿ, ಬಿ.ವಿ. ಮಹೇಶ್, ವೃತ್ತ ನಿರೀಕ್ಷಕ ವೆಂಕಟಾಚಲಪತಿ, ರಾಮಯ್ಯ, ನಾರಾಯಣಪ್ಪ, ಅಪ್ಪಯ್ಯಗೌಡ ಇದ್ದರು.
ಟೇಕಲ್ನಲ್ಲಿ ವಾಲ್ಮೀಕಿ ಜಯಂತಿ
ಟೇಕಲ್: ಕರಡಗುರ್ಕಿ ಹಾಗೂ ಹುಲಿಗುಟ್ಟೆ ಗ್ರಾಮದವರು ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಿದರು. ವಾಲ್ಮೀಕಿ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಕೆ.ವಿ. ರಾಜಪ್ಪ, ಚಲಪತಿ, ಟೈಲರ್ ತಿಮ್ಮರಾಯಪ್ಪ, ಹುಲಿಗುಟ್ಟೆಯ ತಿಮ್ಮರಾಯಪ್ಪ, ಎಚ್.ಎನ್. ಗೋವಿಂದಪ್ಪ, ವೆಂಕಟಸ್ವಾಮಿ, ಚಲಪತಿ, ಕೃಷ್ಣಮೂರ್ತಿ, ರಮೇಶ್, ಮುನಿರಾಜು, ಆಂಜಿನಪ್ಪ, ರಾಮಚಂದ್ರ ಇದ್ದರು.
ಜಯ ಕರ್ನಾಟಕ ಸಂಘಟನೆಗೆ ಸಾಮೂಹಿಕ ರಾಜಿನಾಮೆ
ಮಾಲೂರು: ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಸ್ತುವಾರಿ ದಿಲೀಪ್ ಶೆಟ್ಟಿ ಮತ್ತು ಜಿಲ್ಲಾಧ್ಯಕ್ಷ ತ್ಯಾಗರಾಜು ರವರು ತಾಲೂಕು ಘಟಕದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ತಾಲೂಕು ಘಟಕದ ಪದಾಧಿಕಾರಿಗಳು ಸಂಘಟನೆಗೆ ರಾಜಿನಾಮೆ ನೀಡಿ ಜೈ ಕರ್ನಾಟಕ ವೇದಿಕೆ ಸ್ಥಾಪಿಸುತ್ತಿರುವುದಾಗಿ ಸಂಘಟನೆಯ ತಾಲೂಕು ಅಧ್ಯಕ್ಷ ಟಿ.ಆರ್.ನಾರಾಯಣ ಗೌಡ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧ್ಯಕ್ಷ ತ್ಯಾಗರಾಜ್ ಹಾಗೂ ಉಸ್ತುವಾರಿ ದಿಲೀಪ್ ಶೆಟ್ಟಿ ರವರು ತಾಲೂಕು ಪದಾಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ರಾಜ್ಯಾಧ್ಯಕ್ಷರಿಗೆ ತಿಳಿಸಿರುವುದು ಪ್ರಮಾಣಿಕ ಹೋರಾಟ ನಡೆಸುತ್ತಿರುವ ನಮಗೆ ಬೇಸರ ತರಿಸಿದ್ದು, ರಾಜ್ಯ ಹಾಗೂ ಜಿಲ್ಲಾಧ್ಯಕ್ಷರ ಸರ್ವಾದಿಕಾರಿ ಧೋರಣೆ ವಿರೋಧಿಸಿ ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಸಾಮೂಹಿಕವಾಗಿ ಸಂಘಟನೆಯಿಂದ ಹೂರಬಂದಿರುವುದಾಗಿ ಹೇಳಿದರು. ಗೌರವಾಧ್ಯಕ್ಷ ಎಂ.ಆರ್. ಧನರಾಜ್, ಕಾರ್ಯಾಧ್ಯಕ್ಷ ವಿ. ಶ್ರೀನಿವಾಸ್, ಉಪಾಧ್ಯಕ್ಷ ಬಿ.ಎ. ರಾಜಪ್ಪ,ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಕಾರ್ಯದರ್ಶಿ ಟಿ.ವಿ. ಜಯಣ್ಣ, ಜಾವೀದ್, ಅನಿಲ್ ಕುಮಾರ್, ನಾಗರಾಜ್, ಮುನಿರಾಜ್, ವಾಸು, ಕೆ. ಆಶೋಕ್ ಇದ್ದರು.
'ಶೋಷಣೆ ತಪ್ಪಿಸಲು ಭಾಗ್ಯಲಕ್ಷ್ಮಿ'
ಬಂಗಾರಪೇಟೆ: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ಶೋಷಣೆ ತಪ್ಪಿಸಲು ಸರ್ಕಾರ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು ಹೆಣ್ಣು ಮಕ್ಕಳು ಧೈರ್ಯವಾಗಿ ಅಡೆತಡೆಗಳನ್ನು ಎದುರಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ವಿತರಿಸಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಮುಂತಾದ ಹೇಯೆ ಕೃತ್ಯಗಳು ನಡೆಯುತ್ತಿದ್ದು ಇದು ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು.
ತಾಪಂ ಅಧ್ಯಕ್ಷೆ ರೇಣುಕಾ ಬಾಲಚಂದ್ರ, ಉಪಾಧ್ಯಕ್ಷ ಸಂಪಂಗಿರೆಡ್ಡಿ, ಜಿಪಂ ಸದಸ್ಯರಾದ ನಾರಾಯಣಮ್ಮ, ಮುತ್ಯಾಲಮ್ಮ, ಪುರಸಭೆ ಸದಸ್ಯರಾದ ಗಂಗಮ್ಮ, ಭಾಗ್ಯಮ್ಮ, ಶಫಿ, ವೆಂಕಟೇಶಗೌಡ, ತಹಸೀಲ್ದಾರ್ ಉಷಾ, ಇಒ ಮಹದೇವಪ್ಪ, ವೃತ್ತ ನಿರೀಕ್ಷಕ ವೆಂಕಟಾಚಲಪತಿ ಇದ್ದರು.
ಕೆಜಿಎಫ್ನಲ್ಲಿ ವಾಲ್ಮೀಕಿ ಜಯಂತಿ
ಕೆಜಿಎಫ್: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು, ನಗರಸಭಾ ಕಾರ್ಯಾಲಯ ಸೇರಿದಂತೆ ಇತರೆ ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ವಾಲ್ಮೀಕಿ ಅವರ ಭಾವ ಚಿತ್ರವನ್ನಿಟ್ಟು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ವಾಲ್ಮೀಕಿ ನಾಯಕ ಜನಾಂಗದ ರಕ್ಷಣಾ ಕ್ಷೇಮಾಭಿವೃದ್ಧಿ ಸಂಘ, ಪೆದ್ದಪಲ್ಲಿ ಕೊತ್ತೂರು ಘಟ್ಟರಾಗಡಹಳ್ಳಿ, ಘಟ್ಟಕಾಮದೇನಹಳ್ಳಿ ಪಂಚಾಯಿತಿ ಆಶ್ರಯದಲ್ಲಿ ವಾಲ್ಮೀಕಿ ಜಯಂತಿಯನ್ನು ಸಡಗರದಿಂದ ಆಚರಿಸಿದರು.
ನಗರಸಭೆಯಲ್ಲಿ ಪೌರಾಯುಕ್ತ ವಿ. ಬಾಲಚಂದ್ರ ನೇತೃತ್ವದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಗೌರವ ಸಲ್ಲಿಸಿ ವಾಲ್ಮೀಕಿ ಜಯಂತಿಯನ್ನು ಆಚರಿಸಿದರು. ವಾಲ್ಮೀಕಿ ನಾಯಕ ಜನಾಂಗದ ರಕ್ಷಣಾ ಕ್ಷೇಮಾಭಿವೃದ್ದಿ ಸಂಘ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿಗೆ ಪದಾಧಿಕಾರಿಗಳ ಆಯ್ಕೆ
ಕೆಜಿಎಫ್: ನಗರದ ಬಿಜೆಪಿ ಪದಾಧಿಕಾರಿಗಳ ಆಯ್ಕೆಯ ಪಟ್ಟಿಯನ್ನು ನಗರ ಘಟಕದ ಅಧ್ಯಕ್ಷ ಸುರೇಶ್ನಾರಾಯಣ್ ಮಾರ್ಗದರ್ಶನದಲ್ಲಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಹಾಗೂ ನಗರ ಪ್ರಧಾನ ಕಾರ್ಯದರ್ಶಿ ಬಾಟಾ ಗೋಪಾಲ್ ಸಮ್ಮುಖದಲ್ಲಿ ಘೋಷಿಸಲಾಯಿತು.
ಸ್ಲಮ್ ಮೋರ್ಚಾ ಅಧ್ಯಕ್ಷರಾಗಿ ಜೋಸೆಫ್, ಉಪಾಧ್ಯಕ್ಷರಾಗಿ ಶ್ರೀನಿವಾಸ್, ಹಿಂದುಳಿದ ವರ್ಗದ ಅಧ್ಯಕ್ಷರಾಗಿ ರಷೀದ್ಖಾನ್, ಉಪಾಧ್ಯಕ್ಷರಾಗಿ ಎಸ್.ಎ. ಮೊಹ್ಮದ್, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ವಿ. ಮೇಘನಾಥನ್, ಉಪಾಧ್ಯಕ್ಷರಾಗಿ ಎನ್. ಉದಯಕುಮಾರ್, ಪಾಂಡಿಯನ್, ಮಹಿಳಾ ಮೋರ್ಚಾ ಅಧ್ಯಕ್ಷಿಯಾಗಿ ಪಿ. ಉಮಾ, ಉಪಾಧ್ಯಕ್ಷೆ ಶಶಿಕಲಾ, ತನಿಗೈ, ಯುವ ಮೋರ್ಚಾ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷ ಕಾರ್ತಿಕ್, ರಾಜಾ ಸೇರಿದಂತೆ ಇತರೆ ಪದಾಧಿಕಾರಿಗಳ ಆಯ್ಕೆಯ ಪಟ್ಟಿಯನ್ನು ಘೋಷಿಸಲಾಯಿತು.ಪಕ್ಷದ ರಾಜ್ಯ ಪರಿಷತ್ ಸದಸ್ಯ ನೈನಾರವಿ, ಮೇಘನಾಥನ್, ನಾಗರಾಜ್, ವೆಂಕಟೇಶ್, ಮದನ್ಗೋಪಾಲ್, ತನಿಗಾಚಲಂ ಹಾಜರಿದ್ದರು.
ಶಾಸಕರ ನಿಂದನೆ ಖಂಡಿಸಿ ಮನವಿ
ಕೆಜಿಎಫ್: ಶಾಸಕಿ ವೈ. ರಾಮಕ್ಕ ಮತ್ತು ಮಾಜಿ ಶಾಸಕ ವೈ. ಸಂಪಂಗಿ ಅವರನ್ನು ನಿಂದಿಸಿದ ಮಾಜಿ ಶಾಸಕರಾದ ಎಂ. ಭಕ್ತವತ್ಸಲಂ ಹಾಗೂ ಎಸ್. ರಾಜೇಂದ್ರನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕೋಲಾರ ಜಿಲ್ಲಾ ರೇಣುಕಾ ಯಲ್ಲಮ್ಮ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಮಾಜದ ಜಿಲ್ಲಾಧ್ಯಕ್ಷ ಡಾ.ಪಿ. ನಾರಾಯಣಸ್ವಾಮಿ, ಮಾಜಿ ಶಾಸಕರು ಅವಹೇಳನಾಕಾರಿ ಭಾಷಣ ಮಾಡಿರುವುದನ್ನು ಸಮಾಜ ಖಂಡಿಸುವುದಾಗಿ ತಿಳಿಸಿದರು. ಮನವಿಯನ್ನು ಕೆಜಿಎಫ್ ಪೊಲೀಸ್ ಉಪರಕ್ಷಣಾಧಿಕಾರಿ ಎಚ್.ಪಿ. ರಾಜಣ್ಣ ಅವರಿಗೆ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಲ್ಲೇರಪ್ಪ, ಜಿಲ್ಲಾ ಯುವ ಅಧ್ಯಕ್ಷ ಅಶ್ವತ್ಕುಮಾರ್, ಗೌರವಾಧ್ಯಕ್ಷ ಪಿ. ವೆಂಕಟೇಶಯ್ಯ, ರಾಮಚಂದ್ರ, ಬಿ.ಎಂ. ರಮೇಶ್ ಇದ್ದರು.