ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಜ ಕಾಲುವೆ ಬಳಿ ಕಸ ವಿಲೇವಾರಿಗೆ ವಿರೋಧ

Vishwanath S
Updated On : 19 Oct 2013, 12:23 pm

ಕ.ಪ್ರ. ವಾರ್ತೆ  ಕೋಲಾರ  ಅ.18
ರಾಜ ಕಾಲುವೆ ಸಮೀಪ ಹಾಗೂ ಖಾಸಗಿ ಜಮೀನಿನಲ್ಲಿ ಕೋಲಾರ ನಗರಸಭೆಯವರು ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚುತ್ತಿದೆ ಎಂದು ಆರೋಪಿಸಿ ಯುವಕರು ಕಸವನ್ನು ತುಂಬಿದ್ದ ಟ್ರ್ಯಾಕ್ಟರ್‌ಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದ ಘಟನೆ ತಾಲೂಕಿನ ಹೊದಲವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹೊದಲವಾಡಿ ಗ್ರಾಮದ ನಿವಾಸಿ ಎಚ್.ಪಿ. ವೆಂಕಟೇಶಪ್ಪ ಎಂಬುವರು ತಮ್ಮ ಸ್ವಂತ ಜಮೀನಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಹಾಗೂ ತ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತಿದ್ದು, ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೆ ಕಸವನ್ನು ವಿಲೇವಾರಿ ಮಾಡುತ್ತಿರುವುದರಿಂದ ಪರಿಸಕ್ಕೆ ಹಾನಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೊಳ್ಳೆ, ನೊಣಗಳ ಕಾಟ: ತಮ್ಮ ಖಾಸಗಿ ಜಮೀನಿನಲ್ಲಿ ಕಸ ಸುರಿಯುವುದಕ್ಕೆ ವೆಂಕಟೇಶ ಅನುಮತಿ ನೀಡಿದ್ದು ಅದರಂತೆ ನಗರಸಭೆಯವರು ಕೆಲ ದಿನಗಳಿಂದ ಈ  ಜಮೀನಿನಲ್ಲಿ ಘನ ತ್ಯಾಜ್ಯಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಬಂದು ಸುರಿಯುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿರುವುದರಿಂದ ಕೆಂಗಟ್ಟಿರುವ ಜನತೆ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಮೂಲಕ ಜನತೆಯ ಆರೋಗ್ಯದ ಜೊತೆ ಚಲ್ಲಾಟವಾಡುತ್ತಿರುವುದಾಗಿ ಆರೋಪಿಸಿದರು.
ಜಮೀನು ಮಾಲೀಕ ವೆಂಕಟೇಶಪ್ಪನವರು ಜನತೆಯ ಸಮಸ್ಯೆಗೆ ಸ್ಪಂಧಿಸಿ ಮಾತನಾಡಿ, ತಾವು ಕಸ ವಿಲೇವಾರಿಗೆ ಜಾಗ ನೀಡಿರುವುದು ನಿಜ. ಆದರೆ, ನಗರಸಭೆಯವರು ಕಸ ಸುರಿದ ನಂತರ ಅದನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡುತ್ತಿಲ್ಲ, ದೈನಿಂದಿನ ಕಸದ ಜೊತೆಗೆ ಮಾಂಸದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದ ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದೆ, ಜನತೆಯ ನೆಮ್ಮದಿಗೆ ಭಂಗ ಉಂಟಾಗಿದೆ ಎಂದು ದೂರಿದರು.
ಆಲೂಗಡ್ಡೆ ಬೆಳೆ ನಷ್ಟ: ಹೊದಲವಾಡಿ ಸಮೀಪದ ಚನ್ನಸಂದ್ರ ಕೆರೆಗೆ ಹಾದು ಹೋಗುವ ನೀರಿನ ಕಾಲುವೆಯ ಅಕ್ಕ ಪಕ್ಕದಲ್ಲೂ ತ್ಯಾಜ್ಯಗಳನ್ನು ಸುರಿಯಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ಕಾಲುವೆ ಮುಚ್ಚಿ ಹೋಗಿ ರೈತರ ತೋಟಗಳಿಗೂ ನೀರು ನುಗ್ಗಿ ಆಲೂಗಡ್ಡೆ ಬೆಳೆ ನಷ್ಟವಾಗಿದೆ ಎಂದು ಗ್ರಾಮದ ಮಂಜು ಎಂಬುವರು ನಗರಸಭೆಯ ವಿರುದ್ಧ ಕಿಡಿಕಾರಿದರು. ಸೊಳ್ಳೆ ಮತ್ತು ನೊಣಗಳ ಹಾವಳಿಯಿಂದಾಗಿ ಗ್ರಾಮಗಳಲ್ಲಿ ಯಾರೊಬ್ಬರೂ ನೆಮ್ಮದಿಯಿಂದ ಇರಲು ಆಗುತ್ತಿಲ್ಲ, ದುರ್ವಾಸನೆಯ ಜೊತೆಗೆ ಅನಾರೋಗ್ಯದ ಭಯ ಕಾಡುತ್ತಿದೆ ಎಂದು ಗ್ರಾಮದ ನಿವಾಸಿಗಳಾದ ನಾಗರಾಜ್, ಶ್ರೀನಿವಾಸ್, ವೇಣು, ಮುರಳಿ  ಸೇರಿದಂತೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಸರ್ಕಾರಿ  ರಜೆ ಇರುವುದರಿಂದ ನಗರಸಭೆಯ ಸ್ಟೋರ್ ಕೀಪರ್ ಲಭ್ಯವಾಗುತ್ತಿಲ್ಲ. ನಗರಸಭೆ ಆಯುಕ್ತರ ಜೊತೆ ಮಾತನಾಡಿ ಸಮಸ್ಯೆ ನಿವಾರಣೆ ಮಾಡುವುದಾಗಿ ಜಮೀನು ಮಾಲೀಕ ತಿಳಿಸಿದ ನಂತರ ಜನತೆ ಪ್ರತಿಭಟನೆ ನಿಲ್ಲಿಸಿದರಾದರೂ ಕಸ ವಿಲೇವಾರಿಗೆ ಅವಕಾಶ ನೀಡಲಿಲ್ಲ. ವಿಷಯ ತಿಳಿದ ನಗರಸಭೆ ಆಯುಕ್ತ ಜಗದೀಶ್ ಅವರು ಆರೋಗ್ಯ ವಿಭಾಗದ ಸಿಬ್ಬಂದಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕಳುಹಿಸಿಕೊಟ್ಟು ಖಾಸಗಿ ಜಮೀನಿನಲ್ಲಿ ಸುರಿದಿದ್ದ ಕಸಕ್ಕೆ ಬೆಂಕಿ ಹಚ್ಚಿ ವಿಲೇವಾರಿ ಮಾಡಿದ ನಂತರ ಜನತೆ ಸಮಾಧಾನಗೊಂಡರು.

ಕಾಲುವೆಗಳ ಸಂರಕ್ಷಣೆ ಜನತೆ ಹೊಣೆ: ಖಾದರ್
ಕೋಲಾರ:
ಜಿಲ್ಲೆಯ ಭವಿಷ್ಯ ಇಲ್ಲಿನ ಜನರ ಕೈಯಲ್ಲಿದೆ. ರಾಜ ಕಾಲುವೆಗಳನ್ನು ಒತ್ತುವರಿ ಮಾಡಿರುವವರು ಹೊರಗಿನ ಜನರು ಅಥವಾ ಅಧಿಕಾರಿಗಳು ಅಲ್ಲ. ಕೋಲಾರದ ಭವಿಷ್ಯಕ್ಕಾಗಿ ರಾಜ ಕಾಲುವೆಗಳ ಸಂರಕ್ಷಣೆ ಸ್ಥಳೀಯ ಜನರ ಹೊಣೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆಗಾಲದಲ್ಲಿ ನೀರು ಕರೆಗಳಿಗೆ ಹರಿಯಲಾಗದೆ ಒತ್ತುವರಿ ಪ್ರದೇಶಗಳಿಗೆ ನುಗ್ಗುವಂತಾಗಿದೆ. ಒತ್ತುವರಿಯಾಗಿರುವ ರಾಜ ಕಾಲುವೆಗಳನ್ನು ತೆರವು ಮಾಡಿ ಕೋಲಾರದ ಭವಿಷ್ಯಕ್ಕೆ ಸಹಕಾರ ನೀಡಬೇಕೆಂದರು.
ಕೆರೆಗಳ ರಾಜಕಾಲುವೆ ಒತ್ತುವರಿ ತೆರವು ಹಾಗೂ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾಲುವೆಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮಳೆಯ ನೀರು ಸರಾಗವಾಗಿ ಹರಿದು ಕೆರೆಗಳಿಗೆ ಸೇರುವುದಕ್ಕೆ ರೂಪಿಸುವ ಯೋಜನೆಗೆ ನಗರಸಭೆಯಲ್ಲಿ ಲಭ್ಯವಿರುವ ಹಣದ ಜೊತೆಗೆ ಸರ್ಕಾರದಿಂದಲೂ ಅಗತ್ಯ ಅನುದಾನ ಬಿಡುಗಡೆ ಮಾಡಿಸುವುದಕ್ಕೆ ಪ್ರಾಮಾಣಿಕ ಯತ್ನ ಮಾಡುವೆ ಎಂದರು.
ಐದು ವರ್ಷಗಳಿಂದ ಕೆರೆ, ಕಾಲುವೆ ಒತ್ತುವರಿ ಬಗ್ಗೆ ಈ ಹಿಂದಿನವರು ಕೇವಲ ಮಾತನಾಡಿದ್ದಾರೆಯೇ ಹೊರತು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ನಮ್ಮ ಸರ್ಕಾರ ಈಗ ಕೋಲಾರದ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿನ ಗಮನ ನೀಡುತ್ತಿದೆ. ರಾಜ ಕಾಲುವೆಗಳ ಒತ್ತುವರಿ ವಿಚಾರದಲ್ಲಿ ಕುಮ್ಮಕ್ಕು ನೀಡಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧವೂ ಕ್ರಮ ಅಗತ್ಯ. ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನು ಇಲ್ಲವಾದ್ದರಿಂದ ಒತ್ತುವರಿ ಯಾರೇ ಮಾಡಿದ್ದರೂ ಮನವೊಲಿಸಿ ತೆರವು ಮಾಡಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅಹಮದ್ ಈ ಕೆಲಸಕ್ಕೆ ಒಪ್ಪಿದ್ದಾರೆ. ನಾನೂ ಜನರ ಮನವೊಲಿಸುತ್ತೇನೆ. ನಗರಸಭೆ ಸದಸ್ಯರು, ಶಾಸಕರು ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ರಾಜ ಕಾಲುವೆಗಳನ್ನು ತೆರವು ಮಾಡಿಸಬೇಕೆಂದರು.
ನಗರದಲ್ಲಿ ಅನೇಕರು ಸರ್ಕಾರಿ ಆಸ್ತಿಯನ್ನು ಅತಿಕ್ರಮಿಸಿಕೊಂಡು ಕಟ್ಟಡಗಳನ್ನು ಕಟ್ಟಿದ್ದಾರೆ. ಕೋಲಾರದಲ್ಲಿ ಸರ್ಕಾರದ ಜಾಗ ಸಾಕಷ್ಟು ಇರುವುದರಿಂದ ಜನತೆ ರಾಜ ಕಾಲುವೆಯಲ್ಲಿ ಕಟ್ಟಡ ನಿರ್ಮಾಣ ಮಾಡಬೇಕಾದ ಅವಶ್ಯಕತೆಯಿಲ್ಲವೆಂದರು.
ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮುಂದಾಗಿರುವುದರಿಂದ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಆದರೂ ಜನರ ಹಿತದೃಷ್ಠಿಯಿಂದ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement