ರಾಮಾಯಣದಿಂದ ವಾಲ್ಮೀಕಿ ಜಗತ್ತಿಗೆ ಮಾದರಿ
ಚಿಂತಾಮಣಿ: ಆದಿಕವಿ ಮಹರ್ಷಿ ವಾಲ್ಮೀಕಿಯ ಆದರ್ಶ, ತತ್ವ ಸಿದ್ದಾಂತಗಳು ಈಗಿನ ಆಧುನಿಕ ಯುಗಕ್ಕೆ ಮಾದರಿಯೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕರೆ ನೀಡಿದರು.
ಪಟ್ಟಣದಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತಿಹಾಸ ಪುರುಷ ವಾಲ್ಮೀಕಿ ಮಹರ್ಷಿ ರಾಮಾಯಣ ಬರೆದು ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ. ಇವರ ವ್ಯಕ್ತಿತ್ವ, ಭಕ್ತಿ ಇಂದಿನ ಯುವಜನತೆಗೆ ಆದರ್ಶವಾಗಲಿ ಎಂದು ಹೇಳಿದರು. ರಾಮಾಯಣ ಹಿಂದೂ ಧರ್ಮದ ಬಹಳ ಪವಿತ್ರ ಗ್ರಂಥವಾಗಿದೆ. ಇಂದಿಗೂ ಸಹ ರಾಮಾಯಣದಲ್ಲಿ ನಡೆದಿರುವ ಸನ್ನಿವೇಶಗಳ ಬಗ್ಗೆ ಹಾಗೂ ರಾಮನ ಮಕ್ಕಳಾದ ಲವ-ಕುಶಗೆ ವಿದ್ಯೆ ಕಲಿಸಿ ಇಡೀ ಜಗತ್ತಿಗೆ ವಾಲ್ಮೀಕಿ ಕೊಡುಗೆ ಮಹತ್ವದ ಬಗ್ಗೆ ಹೇಳಿದರು. 24 ಸಾವಿರ ಶ್ಲೋಕಗಳಿಂದ ಕೂಡಿರುವ ರಾಮಾಯಣ ಗ್ರಂಥ ನಿರ್ಮಾಣ ಮಾಡಿದ ಮಹಾಕವಿ ವಾಲ್ಮೀಕಿ ಬಗ್ಗೆ ನಮನಗಳನ್ನು ಸಭೆಯಲ್ಲಿ ಸಲ್ಲಿಸಿದರು.
ನಂತರ ಸ್ತಬ್ದ ಚಿತ್ರಗಳಿಗೆ ಹಾಗೂ ಮೆರವಣಿಗೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಭಾಷಣಗಾರರಾಗಿ ಕನ್ನಡ ಉಪನ್ಯಾಸಕ ಲಕ್ಷ್ಮಿನಾರಾಯಣ ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಬಗ್ಗೆ ಸವಿಸ್ತಾರವಾಗಿ ಹೇಳಿದರು. ನಾರಾಯಣಸ್ವಾಮಿ, ಕೆ.ವಿ.ಮೀನಾ ಶ್ರೀರಾಮರೆಡ್ಡಿ, ನಗರಸಭಾ ಆಯುಕ್ತ ಚನ್ನೇಗೌಡ, ಮೊಹಮದ್ ಸಫೀರ್, ತಾಪಂ ಕಾರ್ಯನಿರ್ವಣಾಧಿಕಾರಿ ವಸಂತ ಕುಮಾರ್, ಬಿಇಓ ಕೆ.ಜಿ.ರಂಗಯ್ಯ ತಿನಕಲ್ ಪೆದ್ದಪ್ಪಯ್ಯ, ತೌಡ ಅಪ್ಪಲ್ಲ, ಸುಜಾತಮ್ಮ ಶಿವಣ್ಣ, ಯನುಮಲಪಾಡಿ ಚಂದ್ರಾರೆಡ್ಡಿ, ನರಸಪ್ಪ, ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಪ್ರಕಾಶ್, ನಟರಾಜ್ ಸೇರಿದಂತೆ ಇನ್ನೂ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.