ವಾಲ್ಮೀಕಿ ಜಯಂತಿ: ಸ್ತಬ್ಧಚಿತ್ರಗಳ ಮೆರವಣಿಗೆ
ಕೋಲಾರ: ನಗರದಲ್ಲಿ ಜಿಲ್ಲಾ ಆಡಳಿತದಿಂದ ವಾಲ್ಮೀಕಿ ಜಯಂತಿ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಸ್ತಬ್ಧ ಚಿತ್ರಗಳ ಮೆರವಣಿಗೆ ಅದ್ಧೂರಿಯಾಗಿತ್ತು. ತಾಲೂಕಿನ ವಿವಿಧ ಕಡೆಗಳಿಂದ ವಾಲ್ಮೀಕಿ ಜನಾಂಗದ ವಿವಿಧ ಸಂಘ ಸಂಸ್ಥೆಗಳು ಹತ್ತಾರು ಪಲ್ಲಕ್ಕಿಗಳಲ್ಲಿ ವಾಲ್ಮೀಕಿಯ ಭಾವಚಿತ್ರವನ್ನು ಅಳವಡಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ವಿವಿಧ ಇಲಾಖೆಗಳು ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ಪ್ರಚುರ ಪಡಿಸುವ ಉದ್ದೇಶದಿಂದ ಮೆರವಣಿಗೆಯಲ್ಲಿ ಭಾಗವಹಿಸಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಸಾದರ ಪಡಿಸಿದ ಸ್ತಬ್ಧಚಿತ್ರ ಹೊರತು ಪಡಿಸಿ ಉಳಿದಂತೆ ಅನೇಕ ಇಲಾಖೆಗಳು ಪ್ಲೆಕ್ಸ್‌ಗಳ ಮೂಲಕ ಗಮನ ಸೆಳೆದವು.
ನಗರದ ಕಾಲೇಜು ವೃತ್ತದ ಬಳಿ ಇರುವ ವಾಲ್ಮೀಕಿ ಭವನದಿಂದ ಮೆರವಣಿಗೆ ಏರ್ಪಡಿಸಲಾಗಿತ್ತು. ಶಾಸಕ ವರ್ತೂರ್ ಪ್ರಕಾಶ್ ಉದ್ಘಾಟನೆ ನೆರವೇರಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಎಸ್ಪಿ ಡಾ. ರಾಮ್‌ನಿವಾಸ್ ಸಪಟ್ ಹಾಗೂ ವಾಲ್ಮೀಕಿ ಜನಾಂಗದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಹಾನ್ ವ್ಯಕ್ತಿಗಳನ್ನು ಸ್ವಾರ್ಥಕ್ಕಾಗಿ ಬಳಸಬೇಡಿ
ಬಾಗೇಪಲ್ಲಿ: ವಿಶ್ವ ಕಲ್ಯಾಣಕ್ಕಾಗಿ ಅವತರಿಸಿದ ಮಹಾನ್ ವ್ಯಕ್ತಿಗಳನ್ನು ಸ್ವಾರ್ಥಕ್ಕಾಗಿ ಒಂದು ಜಾತಿ, ಮತ ಮತ್ತು ಧರ್ಮಕ್ಕೆ ಸೀಮಿತಗೊಳಿಸಿ ರಾಜಕೀಯಕ್ಕೆ ಬಳಸಿಕೊಳ್ಳುವುದು ಸಮಂಜಸವಲ್ಲವೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕಿವಿ ಮಾತು ಹೇಳಿದರು.
ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ನಾವು ಜಾತಿಗಳನ್ನು ಕಟ್ಟಿಕೊಂಡು ಮನಸ್ಸಿಗೆ ನೆಮ್ಮದಿಯಿಲ್ಲದೆ ಹಾಳಾಗುತ್ತಿದ್ದೇವೆ ಎಂದರು. ವಾಲ್ಮೀಕಿ ಜನಾಂಗದವರಿಗೆ ಸಮುದಾಯ ಭವನಕ್ಕೆ ಸ್ಥಳವನ್ನು ಮುಂದಿನ ವಾಲ್ಮೀಕಿ ಜಯಂತಿಯೊಳಗೆ ನೀಡಲು ಹಾಗೂ ಜನಾಂಗದವರ ಅಭಿವೃದ್ಧಿಗಾಗಿ ಶೇ.7.25 ಮೀಸಲಾತಿಯ ಬಗ್ಗೆ ಸದನದಲ್ಲಿ ಪ್ರಶ್ನಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಬಿ. ಸಾವಿತ್ರಮ್ಮ, ಸದಸ್ಯೆ ಅಮರಾವತಿ, ನಾರಾಯಣಮ್ಮ, ತಾಪಂ ಅಧ್ಯಕ್ಷೆ ಮುನಿರತ್ನಮ್ಮ, ಸದಸ್ಯರಾದ ಗೋಪಾಲಕೃಷ್ಣ, ನರಸಿಂಹಪ್ಪ, ನಾರಾಯಣ ನಾಯ್ಕ್, ಪುರಸಭೆಯ ಸದಸ್ಯರಾದ ನಲ್ಲಪ್ಪ, ಚಿನ್ನಮ್ಮ ಮೂರ್ತಿ, ಬಿ.ಎನ್.ಶ್ರೀನಿವಾಸ್, ಕೋಲಾಟ ಆದಿನಾರಾಯಣ, ವಾಲ್ಮೀಕಿ ಅಶ್ವಥಪ್ಪ, ಸಂಘದ ಅಧ್ಯಕ್ಷ ಮರಿಯಪ್ಪ, ರೇಡಿಯೋ ಕೃಷ್ಣಪ್ಪ, ತಹಸೀಲ್ದಾರ್ ಎಂ.ಎ. ಪಧ್ಮ ಭಾಗವಹಿಸಿದ್ದರು.
'ವಾಲ್ಮೀಕಿ ತತ್ವಾದರ್ಶ ಪಾಲಿಸಿ'
ಮಾಲೂರು: ವಾಲ್ಮೀಕಿ ಮಹಾಋಷಿಗಳ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಪುರಸಭೆ ಸದಸ್ಯೆ ಗೀತಾ ವೆಂಕಟೇಶ್ ಹೇಳಿದರು. ಪಟ್ಟಣದ ವಾಲ್ಮೀಕಿ ರಸ್ತೆಯಲ್ಲಿ ಸಮುದಾಯದವರು ಶುಕ್ರವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಸಂಸ್ಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸಿ ಪ್ರಂಚಪವೇ ನಮ್ಮ ಸಂಸ್ಕೃತಿಯ ಕಡೆ ನೋಡುವಂತೆ ಮಾಡಿದ ಮಹಾಪುರುಷರು. ಅವರು ರಚಿಸಿದ ರಾಮಾಯಣದ ಸಾಧನೆ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿದೆ ಎಂದರು. ಪುರಸಭೆ ಹಿರಿಯ ಸದಸ್ಯ ಎಂ.ವಿ. ಮೇಮನ ಮಾತನಾಡಿ, ವಾಲ್ಮೀಕಿರವರ ತತ್ವ-ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು,ಅವರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂಬುಂದನ್ನು ಎಲ್ಲರೂ ಅರಿಯಬೇಕು ಎಂದರು. ಪುರಸಭೆ ಸದಸ್ಯ ಸಿ.ಪಿ. ನಾಗರಾಜ್, ಚಿನ್ನಸ್ವಾಮಿ, ಅಬ್ಬಯ್ಯಪ್ಪ, ಮಿಲ್ಟ್ರಿ ಶ್ರೀನಿವಾಸ್, ವೆಂಕಟೇಶ್, ಮೇಸ್ತ್ರಿ ನಾಗರಾಜ್, ಟಿ.ಕೆ. ನಾಗರಾಜ್, ಚಂದ್ರು, ಶ್ರೀನಿವಾಸ್, ಶೈಲೂ, ವಸಂತ್, ಸಂಪತ್ತು, ಸುಬ್ಬು, ನಂಜುಂಡ ಶಾಸ್ತ್ರೀ ಇದ್ದರು.