ವಾಲ್ಮೀಕಿ ಜಯಂತಿಯಲ್ಲಿ ರಾಜಕೀಯ ಜುಗಲ್ಬಂದಿ
ಕ.ಪ್ರ.ವಾರ್ತೆ , ಕೋಲಾರ , ಅ. 18
ಜಿಲ್ಲಾ ಆಡಳಿತ, ಜಿಪಂ ಹಾಗೂ ಮಹರ್ಷಿ ವಾಲ್ಮೀಕಿ ಸಮುದಾಯದ ಸಹಯೋಗದಿಂದ ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಜಿಲ್ಲೆಯ ರಾಜಕಾರಣಿಗಳ ನಡುವೆ ಇರುವ ಮನಸ್ತಾಪ ಸ್ಫೋಟದ ಕೇಂದ್ರವಾಗಿ ಮಾರ್ಪಟಿತು.
ಕಳೆದ ತಿಂಗಳು ವೇಮಗಲ್ನಲ್ಲಿ ನಡೆದ ಸರ್ಕಾರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದ ಘಟನೆ ಮಾಸದಿರುವಾಗಲೇ ಶಾಸಕ ವರ್ತೂರ್ ಆರ್. ಪ್ರಕಾಶ್ ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಸಚಿವರ ವಿರುದ್ಧ ಮತ್ತೆ ಹರಿಹಾಯುವ ಮೂಲಕ ವೇದಿಕೆಯನ್ನು ಜುಗಲ್ ಬಂದಿಯಾಗಿಸಿದರು. ಕೇಂದ್ರ ಸಚಿವರು ಕಾರ್ಯಕ್ರಮ ಉದ್ಘಾಟಿಸಿ ಮೊದಲು ಮಾತನಾಡಿ, ವಾಲ್ಮೀಕಿ ಬಗ್ಗೆ ಇಂದಿಷ್ಟು ವಿಚಾರ ಹಾಗೂ ಕೇಂದ್ರ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ನೀಡಿರುವ ಯೋಜನೆಗಳನ್ನು ತಿಳಿಸಿ ಕಾರ್ಯಕ್ರಮದಿಂದ ನಿರ್ಗಮಿಸಿದರು.
ನಂತರ ಮಾತನಾಡಿದ ಶಾಸಕ ವರ್ತೂರ್ ಪ್ರಕಾಶ್ ಅವರು, ವಾಲ್ಮೀಕಿ ಜೀವನ ಚರಿತ್ರೆ ದೇಶಕ್ಕೆ ಗೊತ್ತು, ಈ ಶೋಷಿತ ಸಮಾಜದ ಅಭಿವೃದ್ಧಿಗೆ ನಾನೇನು ಮಾಡಿದ್ದೇನೆಂದು ಹೇಳದೆ ಕಾರ್ಯಕ್ರಮದಿಂದ ನಿರ್ಗಮಿಸುವುದು ಎಷ್ಟು ಸರಿ ಎಂದು ಗುಡುಗಿದರಲ್ಲದೆ, ವಾಲ್ಮೀಕಿ ಜನಾಂಗಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಚಿಂತಿಸುವುದನ್ನು ಮೊದಲು ಕಲಿಯಿರಿ ಎಂದು ವಾಲ್ಮೀಕಿ ಜಯಂತಿ ಕಾರ್ಯಕ್ರವನ್ನು ಜುಗಲ್ ಬಂದಿಗೆ ವೇದಿಕೆಯಾಗಿಸಿದರು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವಾಲ್ಮೀಕಿ ಭವನ ನಿರ್ಮಾಣ, ವಾಲ್ಮೀಕಿ ವಸತಿ ಶಾಲೆ ತೆರೆಯಲು ಮುಖ್ಯಮಂತ್ರಿಗಳಿಗೆ ಕೋರಿರುವುದಾಗಿ ಕೆ.ಎಚ್. ಮುನಿಯುಪ್ಪ ತಮ್ಮ ಭಾಷಣದಲ್ಲಿ ತಿಳಿಸಿದ್ದರ ಬಗ್ಗೆ ಸಿಡಿಮಿಡಿಗೊಂಡ ವರ್ತೂರು ಪ್ರಕಾಶ್, ಶೋಷಿತರ ಕೆಲಸ ಮಾಡಬೇಕಾದ ಹೃದಯವಂತಿಕೆ ಬೇಕು, ಮುಖ್ಯಮಂತ್ರಿಗೇಳಿದ್ದೇನೆ, ಡಿಸಿಯವರೇ ಜಮೀನು ನೀಡಿ ಎಂದರೆ ಯಾವುದು ಈಡೇರಲ್ಲ, ನಿಮ್ಮ ಜವಾಬ್ದಾರಿ ಎನು ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿ ಚುನಾವಣೆಯಲ್ಲಿ ಜನತೆಗೆ ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿಯುತ್ತಿದ್ದೀರಾ, ನಿಮ್ಮ ಭರವಸೆ ನಿಜವೆಂದು ಜನತೆ ಮೋಸ ಹೋಗುತ್ತಿದ್ದಾರೆ, ಮುಂದಿನ ಆರು ತಿಂಗಳಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಕ್ರಾಂತಿಯಾಗುತ್ತೇ ಎಂದು ಕೆ.ಎಚ್. ಮುನಿಯಪ್ಪನವರಿಗೆ ಸವಾಲು ಹಾಕಿದರು. ತಾಲೂಕಿನ ವಕ್ಕಲೇರಿ, ವೇಮಗಲ್, ನರಸಾಪುರಗಳಲ್ಲಿ ನನ್ನ ಸ್ವಂತ ಹಣದಿಂದ ವಾಲ್ಮೀಕಿ ಭವನವನ್ನು ಮುಂದಿನ ಎರಡು ವರ್ಷಗಳಲ್ಲಿ ನಿರ್ಮಿಸುವುದಾಗಿ ವರ್ತೂರು ಪ್ರಕಾಶ್ ಇದೇ ಸಂದರ್ಭದಲ್ಲಿ ಘೋಷಿಸಿದರಲ್ಲದೆ, ಜಮೀನು ನೀಡುವಂತೆ ಜಿಲ್ಲಾಧಿಕಾರಿಯನ್ನು ಕೇಳುವುದಿಲ್ಲ, ಭವನ ನಿರ್ಮಾಣಕ್ಕೆ ಅನುಮತಿಯೂ ಕೇಳಲ್ಲ, ಜನರ ಬೆಂಬಲದಿಂದ ಭವನ ನಿರ್ಮಿಸುತ್ತೇನೆ ಎಂದು ತಿಳಿಸಿದರು.
ಸಿಎಂಗೆ ವರ್ತೂರು ಸವಾಲು: ಮುಖ್ಯಮಂತ್ರಿಗಳಿಗೆ ಬಡಜನರ ಬಗ್ಗೆ ಕಾಳಜಿಯಿದ್ದರೆ ಕೂಡಲೇ ಮದ್ಯದ ಬೆಲೆ 50 ರು.ಗಳಿಗೆ ಇಳಿಸಲಿ, ವಾಲ್ಮೀಕಿ ಸಿದ್ದರಾಮಯ್ಯರಿಗೆ ಬುದ್ದಿ ನೀಡಲಿ ಎಂದರಲ್ಲದೆ, ಉಸ್ತುವಾರಿ ಸಚಿವರು ಇಂದೇ ಕಾಲೇಜು ವೃತ್ತಕ್ಕೆ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಲಿ ಎಂದು ಆಗ್ರಹಿಸಿ ಕಾರ್ಯಕ್ರಮದಿಂದ ನಿರ್ಗಮಿಸಿದರು.
ಸಚಿವ ಖಾದರ್ ತಿರುಗೇಟು: ಶಾಸಕ ವರ್ತೂರ್ ಪ್ರಕಾಶ್ ಭಾಷಣ ಮುಗಿಯುವವರೆಗೆ ಮೌನಕ್ಕೆ ಶರಣಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಮದ್ಯದ ಬೆಲೆ ಇಳಿಸಿ ಅನ್ನೋದು ಸರಿಯಲ್ಲ, ಇದು ಶಾಸಕರ ಸಂಸ್ಕೃತಿ ಏನೆಂಬುದನ್ನು ತೋರಿಸುತ್ತದೆ. ಆದರೆ, ಶಾಸಕರ ಅಭಿಪ್ರಾಯಕ್ಕೆ ವಾಲ್ಮೀಕಿ ಜನಾಂಗ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲವೆಂಬ ನಂಬಿಕೆ ನನಗಿದೆ. ಶಾಸಕರು ಹೇಳಿದ ಮಾತು ಈ ಸಮಾಜಕ್ಕೆ ಮಾಡಿದ ಅಪಮಾನವಾಗಿದ್ದು, ಯಾವುದೇ ಕಾರಣಕ್ಕೂ ಮದ್ಯ ಮುಟ್ಟಲ್ಲ ಎಂದು ಪ್ರಮಾಣ ಮಾಡುವ ಮೂಲಕ ತಕ್ಕ ಉತ್ತರ ನೀಡುವಂತೆ ವಾಲ್ಮೀಕಿ ಸಮುದಾಯಕ್ಕೆ ಕರೆ ನೀಡಿದರು.
ಶಾಸಕರಿಗೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರ ಇತಿಹಾಸ ಗೊತ್ತಿಲ್ಲದೆ ಪವಿತ್ರವಾದ ವೇದಿಕೆಗಳಲ್ಲಿ ಹಗುರವಾಗಿ ಮಾತನಾಡುತ್ತಿದ್ದಾರೆ, ಇತಿಹಾಸದ ತಿಳಿದರೆ ಮಾತ್ರ ಇತಿಹಾಸ ಸೃಷ್ಟಿ ಸಾಧ್ಯ ಎಂದು ವರ್ತೂರ್ ಪ್ರಕಾಶ್ ಮಾತುಗಳಿಗೆ ಸೂಚ್ಯವಾಗಿ ಉತ್ತರಿಸಿದರು. ನಾನು ಮಂಗಳೂರಿನವನು, ಕಾಲೇಜು ವೃತ್ತದ ಹಿನ್ನಲೆ ನನಗೆ ಗೊತ್ತಿಲ್ಲ, ಅವರು ಹೇಳಿದಂತೆ ಇಂದೇ ವಾಲ್ಮೀಕಿ ವೃತ್ತ ಎಂದು ಘೋಷಿಸಲು ಸಾಧ್ಯವಿಲ್ಲ, ನಗರಸಭೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಸೂಚಿಸಿದರು. ಒಟ್ಟಾರೆ ವಾಲ್ಮೀಕಿ ಜಯಂತಿಯ ವೇದಿಕೆಯನ್ನು ರಾಜಕೀಯ ಭಾಷಣವನ್ನಾಗಿ ಬಳಕೆ ಮಾಡಿಕೊಂಡಿದ್ದು, ಜನರಲ್ಲಿ ಬೇಸರ ಮೂಡಿಸಿತು.
ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಲಿ
ಕೋಲಾರ: ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಿರುವಂತೆ ಕರ್ನಾಟಕ ಸರ್ಕಾರ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಏರಿಕೆ ಮಾಡಬೇಕೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಒತ್ತಾಯಿಸಿದರು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಮಾಡಿರುವ ಮೀಸಲಾತಿ ಮುಂದುವರಿಸಿಕೊಂಡು ಹೋಗುತ್ತಿದ್ದು, ಇದರಿಂದ ಈ ಸಮುದಾಯಗಳಿಗೆ ಸಾಕಷ್ಟು ಅನ್ಯಾಯವಾಗುತ್ತಿರುವುದರಿಂದ ರಾಜ್ಯ ಸರ್ಕಾರ ಪರಿಶಿಷ್ಟ ಜನಾಂಗದ ಮೀಸಲಾತಿಯನ್ನು ಏರಿಕೆ ಮಾಡುವುದು ಉತ್ತಮವೆಂದು ಹೇಳಿದರು.
ರಾಜ್ಯದ 30 ಜಿಲ್ಲೆಗಳಲ್ಲಿ ಸುಮಾರು 3 ಕೋಟಿ ರು.ವೆಚ್ಚದಲ್ಲಿ ವಾಲ್ಮೀಕಿ ವಸತಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದ್ದು, ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಯೋಜನೆಗೆ ಚಾಲನೆ ಸಿಗಲಿದೆ ಎಂದರು. ಶ್ರೀನಿವಾಸಪುರ ತಾಲೂಕಿನಲ್ಲಿ ಏಕಲವ್ಯ ವಸತಿ ಶಾಲೆಗೆ ಮುಂದಿನ ತಿಂಗಳ ಶಿಲಾನ್ಯಾಸ ಮಾಡಲಾಗುವುದು. ಜಿಲ್ಲೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಬೇಕಾಗಿರುವ ಅಗತ್ಯ ನಿವೇಶನವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಎತ್ತಿನ ಹೊಳೆ ಮತ್ತು ಪರಮಶಿವಯ್ಯ ಆಧಾರಿತ ಯೋಜನೆ ಬಗ್ಗೆ ಜನಪ್ರತಿನಿಧಿಗಳ, ಹೋರಾಟಗಾರರ ಮತ್ತು ಮಾಧ್ಯಮ ಮಿತ್ರರ ಸಭೆಯನ್ನು ಸರ್ಕಾರ ನಡೆಸಿ ಇದರ ಸಾಧಕ-ಭಾದಕ ಮತ್ತು ಜಿಲ್ಲೆಗೆ ಅವಶ್ಯಕವಾಗಿರುವ ಯೋಜನೆಗೆ ಚಾಲನೆ ನೀಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ವರ್ತೂರ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಮಾಲೂರು ವೆಂಕಟರಾಮ್, ನರಸಿಂಹಯ್ಯ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ರಕ್ಷಣಾಧಿಕಾರಿ ರಾಮ್ನಿವಾಸ್ ಸಫೆಟ್, ಜಿಪಂ ಸಿಇಒ ಜುಲ್ಪಿಕಾರ್ ಉಲ್ಲಾ, ಡಾ. ಚಂದ್ರಶೇಖರ್, ನರಸಿಂಹಯ್ಯ, ನಾಗರಾಜ್, ಮುನಯ್ಯ, ವಿನೋದ್ ಬಾಬು, ಕಡುವನಹಳ್ಳಿ ಆನಂದ್, ಪೆಟ್ರೋಲ್ ಬಂಕ್ ಮಂಜುನಾಥ್ ಇದ್ದರು.