ಹೆಣ್ಣು ಮಕ್ಕಳು ಶೋಷಣೆ ತಪ್ಪಿಸಲು ಭಾಗ್ಯಲಕ್ಷ್ಮಿ ಯೋಜನೆ
ಬಂಗಾರಪೇಟೆ: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ಶೋಷಣೆ ತಪ್ಪಿಸಲು ಸರ್ಕಾರ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು ಹೆಣ್ಣು ಮಕ್ಕಳು ಧೈರ್ಯವಾಗಿ ಅಡೆತಡೆಗಳನ್ನು ಎದುರಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ವಿತರಿಸಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಮುಂತಾದ ಹೇಯೆ ಕೃತ್ಯಗಳು ನಡೆಯುತ್ತಿದ್ದು ಇದು ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು. ತಾಪಂ ಅಧ್ಯಕ್ಷೆ ರೇಣುಕಾ ಬಾಲಚಂದ್ರ, ಉಪಾಧ್ಯಕ್ಷ ಸಂಪಂಗಿರೆಡ್ಡಿ, ಜಿಪಂ ಸದಸ್ಯರಾದ ನಾರಾಯಣಮ್ಮ, ಮುತ್ಯಾಲಮ್ಮ, ಪುರಸಭೆ ಸದಸ್ಯರಾದ ಗಂಗಮ್ಮ, ಭಾಗ್ಯಮ್ಮ, ಶಫಿ, ವೆಂಕಟೇಶಗೌಡ, ತಹಸೀಲ್ದಾರ್ ಉಷಾ, ಇಒ ಮಹದೇವಪ್ಪ, ವೃತ್ತ ನಿರೀಕ್ಷಕ ವೆಂಕಟಾಚಲಪತಿ ಇದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಗೌರಿಬಿದನೂರು: ಪಟ್ಟಣದ ಇಡಗೂರು ರಸ್ತೆಯಲ್ಲಿರುವ ಹಿಂದೂ ಸಾದರ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ನ.10 ರಂದು ಏರ್ಪಡಿಸಲಾಗಿದ್ದು, ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇ.70 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ತಾಲೂಕಿನ ಹಿಂದೂ ಸಾದರ ಜನಾಂಗದ ವಿದ್ಯಾರ್ಥಿಗಳು ದ್ವಿಪ್ರತಿಯಲ್ಲಿ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಮತಾ ಪ್ರೌಢಶಾಲೆಯ ಅಶ್ವತ್ಥಪ್ಪ ಅವರಿಗೆ ಅ.30 ರ ಒಳಗಾಗಿ ತಲುಪಿಸುವಂತೆ ಸೂಚಿಸಲಾಗಿದೆ. ಮಾಹಿತಿಗಾಗಿ ಬಿ. ಮಂಜುನಾಥ್ 9480202853, ಸಿ.ಹೆಚ್. ದೇವರಾಜ್ 9611558482, ವಿ.ಎ. ಲಕ್ಷ್ಮೀಪತಿ 9845958904 ಸಂಪರ್ಕಿಸಲು ಕೋರಿದೆ.
ಉಪನ್ಯಾಸಕರ ಪ್ರತಿಭಟನೆಗೆ ಬೆಂಬಲ
ಕೋಲಾರ: ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ 21 ರಂದು ಬೆಂಗಳೂರಿನಲ್ಲಿ ನಡೆಸಲಿರುವ ಪ್ರತಿಭಟನೆಗೆ ಕೋಲಾರ ಜಿಲ್ಲಾ ಉಪನ್ಯಾಸಕರ ಸಂಘ ಬೆಂಬಲ ಸೂಚಿಸಿದೆ ಎಂದು ಜಿಲ್ಲಾಧ್ಯಕ್ಷ ಟಿ.ಕೆ. ನಟರಾಜ್ ತಿಳಿಸಿದರು. ಜಿಲ್ಲಾ ಪಿ.ಯು. ಉಪನ್ಯಾಸಕರ ಸಂಘ ಸಭೆ ಸೇರಿ ಉಪನ್ಯಾಸಕರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು. 2009 ರಲ್ಲಿ ಆಯ್ಕೆಯಾದ ಉಪನ್ಯಾಸಕರಿಗೆ ಬಿ.ಇಡ್, ಕಡ್ಡಾಯ ಮಾಡಿರುವುದರ ವಿರುದ್ಧವಾಗಿ ರಾಜ್ಯ ಸಂಘ ಅ.21 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ಧರಣಿ ಹಮ್ಮಿಕೊಂಡಿದೆ. ಈ ದೃಷ್ಟಿಯಲ್ಲಿ ಬಿ.ಇಡ್ ಕಡ್ಡಾಯಗೊಳಿಸಬಾರದೆಂದು ಅಥವಾ ಅದಕ್ಕೆ ಸರಿಸಮಾನವಾದ ಶಿಕ್ಷಣವನ್ನು ಪಡೆಯುವಂತ ತರಭೇತಿಯನ್ನು ನೀಡಬೇಕೆಂದು ತರಭೇತಿಗೆ ಹೊರಡುವ ಉಪನ್ಯಾಸಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಒತ್ತಾಯಿಸಿದರು. ಪಿ.ಯು. ಉಪನ್ಯಾಸಕರು ಎಂ.ಪಿಲ್, ಪಿ.ಎಚ್.ಡಿ, ಅಧ್ಯಯನ ಮಾಡುವಂತಹ ಸಂದರ್ಭದಲ್ಲಿ ವೇತನ ಸಹಿತ ರಜೆ ನೀಡಬೇಕೆಂದು ಬೇಡಿಕೆಗಳಲ್ಲಿ ಒಂದಾಗಿರುತ್ತದೆ. ಹಾಗೆಯೇ ಈ ವಿಚಾರವಾಗಿ ಬಡ್ತಿಯನ್ನು ನೀಡಬೇಕೆಂದು ತಿಳಿಸಿದ್ದಾರೆ. ಪ್ರತಿಭಟನೆಗೆ ಜಿಲ್ಲೆಯ ಎಲ್ಲಾ ಉಪನ್ಯಾಸಕರು ಭಾಗವಹಿಸುವಂತೆ ಕರೆ ನೀಡಿದರು.
28ರಂದು ರೈತರ ಸಮಾವೇಶ
ಕೋಲಾರ: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅ. 28ರಂದು ಮಧ್ಯಾಹ್ನ ನಡೆಯುವ ರೈತ ಸಮಾವೇಶಕ್ಕೆ ಕೋಲಾರ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸ ಗೌಡ ತಿಳಿಸಿದ್ದಾರೆ. ಕೋಲಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀನಿವಾಸ ಗೌಡ, ಜಿಲ್ಲೆಯಿಂದ ಆಗಮಿಸುವ ರೈತರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ. ರೈತರು ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಮುಂದಿಡಬೇಕೆಂದು ಕೋರಿದರು. ಜಿಲ್ಲಾಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಗೆ ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಸಂಪೂರ್ಣವಾಗಿ ಕಡಿವಾಣ ಹಾಕಲು ಮುಂದಾಗಿರುವುದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಪ್ರೋತ್ಸಾಹಿಯಿಸಿ ಅಕ್ರಮ ಮರಳು ಕಾರ್ಯಾಚಾರಣೆಗೆ ಸ್ಪಂದಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ಘಟಕದ ರಾಜ್ಯ ಸಚಾಲಕ ಹೂವಹಳ್ಳಿ ನಾಗರಾಜ್ ಮಾತನಾಡಿದರು. ಬಂಗೋದಿ ನಾಗರಾಜ ಗೌಡ, ಹುಲ್ಕೂರು ಹರಿಕುಮಾರ್, ಮೂರಡಂಹಳ್ಳಿ ಶಿವಾರೆಡ್ಡಿ, ಕೆಂಬೋಡಿ ಕೃಷ್ಣೇಗೌಡ, ತೇರ್ನಹಳ್ಳಿ ವೆಂಕಟೇಶ್ ಗೌಡ, ಆಂಜಿನಪ್ಪ, ಭಕ್ತನ್, ಮಾಸ್ತಿ ಬಾಬು, ನೀಲಕಂಠಪೂರ ಮುನೇಗೌಡ ಇದ್ದರು.
ಮಹರ್ಷಿ ವಾಲ್ಮೀಕಿ ಸರ್ವರ ಸ್ವತ್ತು: ರಮೇಶ್ ಕುಮಾರ್
ಶ್ರೀನಿವಾಸಪುರ: ಮಹರ್ಷಿ ವಾಲ್ಮೀಕಿಯವರನ್ನು ಕೆಳವರ್ಗದವರೆಂದು ಕಡೆಗಣಿಸಿರುವವರ ಕಣ್ಣು ತೆರೆಸಲು ಸರ್ಕಾರ ವಾಲ್ಮೀಕಿ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಪಟ್ಟಿಯಲ್ಲಿ ಸೇರಿಸಿದೆ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ರವರು ಎಲ್ಲಾ ವರ್ಗಗಳ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅಂದು ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ದೇಶದಲ್ಲಿ ಹಲವಾರು ಜಾರಿ ಪಂಗಡಗಳಿದ್ದರೂ ಯಾರನ್ನು ಮಾನ್ಯ ಮಾಡಿರಲಿಲ್ಲ. ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುವುದರಿಂದ ಸಮಾಜದಲ್ಲಿ ನೊಂದ ಶೋಷಣೆಗೊಳಗಾದ ಬಡ ವರ್ಗಗಳಿಗೆ ಆತ್ಮಸ್ಥೈರ್ಯ ಬರುತ್ತಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ತಾಲೂಕಿನ ಮ್ಯಾಕಲಗಡ್ಡ ಗ್ರಾಮದ ಬಳಿ ನಾಯಕ ವಿದ್ಯಾರ್ಥಿನಿಯರಿಗೆ ವಸತಿ ಶಾಲೆ ಪ್ರಾರಂಭಿಸಬೇಕಾದರೆ ಎಲ್ಲಾ ನಾಯಕ ಜನಾಂಗದವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ತೂಪಲ್ಲಿ ಆರ್. ನಾರಾಯಣಸ್ವಾಮಿ, ಜಿ.ಕೆ. ನಾಗರಾಜ್, ಕೊರ್ನಲ್ಲಿ ಆಂಜಪ್ಪ, ಎಲ್.ವಿ. ಗೋವಿಂದಪ್ಪ, ದಿಂಬಾಲ ನಾರಾಯಣಸ್ವಾಮಿ, ಅಶೋಕ್, ತಹಸೀಲ್ದಾರ್ ಜಯ ಇದ್ದರು.